ಶಿವಮೊಗ್ಗ ನ್ಯೂಸ್…

ಕಾಂಗ್ರೆಸ್ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಅಹಂಕಾರದ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಂದು ನೆಹರೂ ಸ್ಟೇಡಿಯಂನಿಂದ ಗೋಪಿ ವೃತ್ತದವರೆಗೆ ಪ್ರತಿಭಟನೆ ನಡೆಸಿ ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.ಸಭೆಯಲ್ಲಿ ಮಾತನಾಡಿದ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಶ್ರೀನಿವಾಸ ಕಾಸರವಳ್ಲಿ ಮಾತನಾಡಿ, ಸಿದ್ಧರಾಮಯ್ಯನವರು ಬಿಜೆಪಿಯ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ನಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಚರ್ಚೆ ನಡೆದಾಗ, ಜನತಾದಳದಲ್ಲಿದ್ದ ಸಿದ್ಧರಾಮಯ್ಯನವರು ಯಾವ ಪಾಡಿಗಾಗಿ ಕಾಂಗ್ರೆಸ್ ಹೋಗಿದ್ದರೆಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.ಹೊರಗಡೆಯಿಂದ ಕಾಂಗ್ರೆಸ್ ಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಿ ಮುಖಂಡರನ್ನು ತುಳಿದು ಮುಖ್ಯಮಂತ್ರಿಯಾದ ಸಿದ್ಧರಾಮಯ್ಯನವರು ಒಬ್ಬ ಕಪಟ ರಾಜಕಾರಣಿ. ಅವರಿಗೆ ಇನ್ನೊಬ್ಬರನ್ನು ತುಳಿದೇ ಗೊತ್ತು. 2006 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೇವಲ 257 ಮತಗಳ ಅಂತರದಲ್ಲಿ ಗೆದ್ದವರು. ಕಾಂಗ್ರೆಸ್ ಪಕ್ಷದ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹಾದೇವಪ್ಪ ನಾಯಕರು ಇಲ್ಲದಿದ್ದರೆ ಅಂದೇ ರಾಜಕೀಯದಿಂದ ಕಳೆದುಹೋಗುತ್ತಿದ್ದರು ಎಂದರು.ಸಿದ್ಧರಾಮಯ್ಯನವರ ಬಗ್ಗೆ ಮಾತನಾಡಿದರೆ ಎಲ್ಲಿ ತಮ್ಮನ್ನು ಸೋಲಿಸುತ್ತಾರೋ ಎಂಬ ಭಯ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ. ಇದು ಸಿದ್ಧರಾಮಯ್ಯನವರಿಗೆ ಪ್ಲಸ್ ಪಾಯಿಂಟ್ ಆಗಿದೆ. ದೇವೇಗೌಡರಿಂದ ಪ್ರಾರಂಭಿಸಿ ತಮ್ಮನ್ನು ಗೆಲ್ಲಿಸಿದ ಶ್ರೀನಿವಾಸ ಪ್ರಸಾದ್, ಹೆಚ್.ಎಂ. ರೇವಣ್ಣ, ಹೆಚ್. ವಿಶ್ವನಾಥ್, ಸಿ.ಎಂ. ಇಬ್ರಾಹಿಂ, ರೋಷನ್ ಬೇಗ್ ಅವರ ಈಗಿನ ಸ್ಥಿತಿಗೆ ಸಿದ್ಧರಾಮಯ್ಯನವರೇ ಕಾರಣ. ಎಂಟಿಬಿ ನಾಗರಾಜ್ ವಿರುದ್ಧ ಸ್ವಜಾತಿಯವರನ್ನು ನಿಲ್ಲಿಸಿದರೂ ಸ್ವತಂತ್ರ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿ ಸೋಲಿಸಿದವರು ಇದೇ ಸಿದ್ಧರಾಮಯ್ಯ. ಇವರು ಅಡ್ಜಸ್ಟ್ ಮೆಂಟ್ ಗಿರಾಕಿ ಎಂದು ಲೇವಡಿ ಮಾಡಿದರು.

ದಲಿತರ ಕುರಿತು ಮಾತನಾಡಲು ಸಿದ್ಧರಾಮಯ್ಯನವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ದಲಿತರ ನಡೆ ಯಾವಾಗಲೂ ಬಿಜೆಪಿಯ ಕಡೆ ಇರುತ್ತದೆ. ಬಿಜೆಪಿಯವರು ಯಾವತ್ತೂ ತೋರಿಕೆಗಾಗಿ ದಲಿತರಿಗೆ ಅಧ್ಯಕ್ಷರನ್ನಾಗಿ ಮಾಡಿಲ್ಲ. ಬಿಜೆಪಿ ಗುಮ್ಮದ ಭಯದ ಹುಟ್ಟಿಸಿ, ಮುಸ್ಲಿಮರನ್ನು ಬೆದರಿಸಿ, ದಲಿತರ ಪರ ಎಂದು ಕಪಟ ನಾಟಕ ತೋರಿಸಿ ಅವರನ್ನು ಮತ ಬ್ಯಾಂಕ್ ಆಗಿ ಮಾಡಿದ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ದಲಿತರಿಗೆ ಮತ್ತು ಹಿಂದುಳಿದವರಿಗೆ ಸಿದ್ಧರಾಮಯ್ಯನವರ ಕಪಟ ನಾಟಕ ಅರ್ಥವಾಗಿದೆ. ಇನ್ನಾದರೂ ಸಿದ್ಧರಾಮಯ್ಯನವರು ತಮ್ಮ ನಡೆ ತಿದ್ದಿಕೊಂಡು ಅವಾಚ್ಯವಾಗಿ ನಿಂದಿಸುವುದನ್ನು ಬಿಟ್ಟು ತಮ್ಮ ಪದಬಳಕೆಗಳ ಬಗ್ಗೆ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಎಸ್.ಸಿ. ಮೋರ್ಚಾ ಪದಾಧಿಕಾರಿಗಳಾದ ಎಂ. ರಾಜು. ಜಯರಾಮ ನಾಯ್ಕ್, ಹೆಚ್. ಶಿವಾಜಿ, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಸಿ. ಮೂರ್ತಿ, ಹರಮಘಟ್ಟ ಸುರೇಶ್, ಮಂಡೇನಕೊಪ್ಪ ದೇವರಾಜ್, ಛಲವಾದಿ ಕೃಷ್ಣ, ವಿದ್ಯಾನಗರ ಲಕ್ಷ್ಮಣ್, ರಂಘೇಶ್, ಯೋಗೇಶ್, ಚನ್ನಮುಂಬಾಪುರ ಮಂಜುನಾಥ್ ಸೇರಿದಂತೆ ಬಿಜೆಪಿ ಜಿಲ್ಲಾ ಎಸ್.ಸಿ. ಹಾಗೂ ಎಸ್.ಟಿ. ಮೋರ್ಚಾದ ಪ್ರಮುಖರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…