ಶಿವಮೊಗ್ಗ ನ್ಯೂಸ್…
ಸಂಗೀತ ಸ್ಫರ್ಧೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿ ಆಗುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು.
ನಗರದ ಮಥುರಾ ಪಾರಾಡೈಸ್‌ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಭಾವಗಾನ ಸುಗಮ ಸಂಗೀತ ತಂಡದಿಂದ ಆಯೋಜಿಸಿದ್ದ ಜಿಲಾ ಮಟ್ಟದ ಭಾವಗೀತೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ವೇದಿಕೆಗಳನ್ನು ಕಲ್ಪಿಸಿದಾಗ ಅವರ ಪ್ರತಿಭೆ ವೃದ್ಧಿಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಸರಿಯಾದ ಸಂಗೀತ ಸಂಸ್ಕಾರ ಸಿಗದೇ ಸುಗಮ ಸಂಗೀತ ಕ್ಷೇತ್ರ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಸಂಗೀತ ಶಾಲೆಗೆ ಸೇರಿಸಿ ತರಬೇತಿ ಕೊಡಿಸಬೇಕು. ಸಂಗೀತಕ್ಕೆ ವಿಶೇಷ ಶಕ್ತಿ ಇದೆ. ಸಂಗೀತಕ್ಕೆ ಸನಾತನ ಕಾಲದಿಂದಲೂ ವಿಶೇಷ ಸ್ಥಾನಮಾನವಿದೆ. ರಾಜರ ಕಾಲದಲ್ಲಿ ಸಂಗೀತ ಕಲಾವಿದರಿಗೆ ವಿಶೇಷ ಸ್ಥಾನಮಾನವಿತ್ತು ಎಂದರು.
ಇದೇ ಸಂದರ್ಭದಲ್ಲಿ ಗಾಯಕ, ನಿರೂಪಕ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಜ್ಞಾನ ಇರುವವರಲ್ಲಿ ಸಂಸ್ಕಾರ ಇರುತ್ತದೆ. ಇಂದು ಸಂಗೀತ ಕಲಿಯುವವರ ಸಂಖ್ಯೆ ಕಡಿಮೆ ಆಗುತ್ತದೆ. ಎಲ್ಲರು ರಿಯಾಲಿಟಿ ಶೋಗಳ ಮೋರೆ ಹೋಗಿದ್ದಾರೆ. ಹಾಗಾಗಿ ಮೂಲ ಸಂಗೀತಕ್ಕೆ ಧಕ್ಕೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಜೇತರಿಗೆ ನಗದು ಬಹುಮಾನ ನೀಡಿ ಪ್ರಶಸ್ತಿ ಪತ್ರ, ಪಾರಿತೋಷಕ ನೀಡಿ ಗೌರವಿಸಲಾಯಿತು. ಭಾವಗೀತೆ ಸ್ಪರ್ಧೆಯಲ್ಲಿ ಕಾವ್ಯಶ್ರೀ ಪ್ರಥಮ ಪಡೆದರು. ಮಥುರಾ ನಾಗರಾಜ್, ಕೃಷ್ಣಮೂರ್ತಿ, ಸುಧೀಗೌಡ, ರಾಧಿಕಾ, ಶಶಾಂಕ್, ವೈಷ್ಣವಿ, ಗಾಯಿತ್ರಿ ಶ್ರೀಧರ್, ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ನವೀನ್‌ಕುಮಾರ್, ಗಾಯಕ ಶ್ರೀಧರ್ ಶಿಕಾರಿಪುರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಭುಜಂಗಪ್ಪ, ವಿಜಯ ಸತೀಶ್, ಭಾಗ್ಯ, ಪಾಲಾಕ್ಷ, ಗಂಗಾಧರ್ ಉಪಸ್ಥಿತರಿದ್ದರು.