ಶಿವಮೊಗ್ಗ ನ್ಯೂಸ್…
ಶಿವಮೊಗ್ಗದ ಯಕ್ಷಾಭಿಮಾನಿಗಳಿಂದ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನ.9 ರಂದು ಸಂಜೆ 6 ಗಂಟೆಗೆ ಯಕ್ಷಗಾನ ಕಲಾವಿದರಿಗೆ ಸನ್ಮಾನ ಹಾಗೂ ತಾಳ ಮದ್ದಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಾಭಿಮಾನಿ ಅಚ್ಯುತ್ ಹೆಬ್ಬಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಕ್ಷಗಾನ ಕಲಾವಿದರಾದ ತೀರ್ಥಹಳ್ಳಿಯ ಗೋಪಾಲ ಆಚಾರ್ಯ ಹಾಗೂ ಎಂ.ಕೆ.ರಮೇಶ ಆಚಾರ್ಯ ಅವರುಗಳನ್ನು ಸನ್ಮಾನಿಸಲಾಗುವುದು. ಈ ಇಬ್ಬರು ಕಲಾವಿದರು ಯಕ್ಷಗಾನದ ಶ್ರೇಷ್ಠ ಕಲಾವಿದರಾಗಿದ್ದಾರೆ. ಗೋಪಾಲ ಆಚಾರ್ಯ ಅವರಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿದೆ. ಹಾಗೆಯೇ ಎಂ.ಕೆ.ರಮೇಶ ಆಚಾರ್ಯರು ಯಕ್ಷಗಾನದ ತೆಂಕು ಮತ್ತು ಬಡಗು ವಿಭಾಗಗಳಲ್ಲಿ ಹೆಸರು ಮಾಡಿದವರು. ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಯಕ್ಷಗಾನದ ತಾಳಮದ್ದಲೆ (ಆಟ-ಕೂಟ)2ರಲ್ಲೂ ಸೈ ಎನಿಸಿಕೊಂಡವರು.
ಇವರಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಈ ಇಬ್ಬರು ಶ್ರೇಷ್ಠ ಕಲಾವಿದರನ್ನು ಸನ್ಮಾನಿಸುವುದು ನಮ್ಮ ಹೆಮ್ಮೆ ಎಂದರು.ಎಂ.ಕೆ.ರಮೇಶ ಆಚಾರ್ಯ ಅವರು ಕೇವಲ ಪಾತ್ರದಾರಿಗಳು ಮಾತ್ರವಲ್ಲ. ಅನೇಕ ಪ್ರಸಂಗಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಅನೇಕ ಸನ್ಮಾನಗಳು, ಪ್ರಶಸ್ತಿಗಳು ಇವರಿಗೆ ಸಿಕ್ಕಿವೆ. ಹಿರಿಯ ಕಲಾವಿದರ ಒಡನಾಡಿಗಳು ಆಗಿದ್ದಾರೆ. ಹಾಗೆಯೇ ಗೋಪಾಲ ಆಚಾರ್ಯ ಅವರು ತೀರ್ಥಹಳ್ಳಿಯವರಾಗಿದ್ದು, ಪೆರಡೂರು ಮೇಳ ಒಂದರಲ್ಲಿಯೇ ಸುಮಾರು 31ವರ್ಷ ಯಕ್ಷ ತಿರುಗಾಟ ನಡೆಸಿದ್ದಾರೆ. ಈಗಲು ಕೂಡ ಅತಿಥಿ ಕಲಾವಿದರಾಗಿ ಪ್ರಚಲಿತದಲ್ಲಿ ಇದ್ದಾರೆ ಎಂದರು.ಇದರ ಜೊತೆಗೆ ತಾಳಮದ್ದಲೆ ಕಾರ್ಯಕ್ರಮವನ್ನು ಸನ್ಮಾನ ಕಾರ್ಯಕ್ರಮದ ನಂತರ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರು ಶರಸೇತು ಬಂಧನ ಎಂಬ ಪ್ರಸಂಗವನ್ನು ಅಭಿನಯಿಸಲಿದ್ದಾರೆ. ಭಾಗವತರಾಗಿ ಕಿಗ್ಗ ಹಿರಣಯ್ಯ, ಗಣೇಶ ಮೂರ್ತಿ, ನವೀನ್ ಎನ್.ಜೆ. ಭಾಗವಹಿಸಲಿದ್ದಾರೆ. ಎಂ.ಕೆ.ರಮೇಶ್ ಆಚಾರ್ಯಅವರು ಅರ್ಜುನ ಪಾತ್ರದಲ್ಲಿ ಕಾಣಿ ಸಿಕೊಳ್ಳಲಿದ್ದಾರೆ ಎಂದರು.ನ.14ರಂದು `ಸುಂದೋಪಸುಂದ’ ಯಕ್ಷಗಾನ: ಮಕ್ಕಳ ದಿನಾಚರಣೆಯ ಅಂಗವಾಗಿ ಯಕ್ಷಗಾನ ಸಂವರ್ಧನ ಸಭಾದ ವತಿಯಿಂದ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನ.14ರಂದು ಸಂಜೆ 6ಗಂಟೆಗೆ ಯಕ್ಷಗುರು ಶ್ರೀ ಪರಮೇಶ್ವರ ಹೆಗಡೆ ಐನಬೈಲು ಅವರ ನಿರ್ದೇಶನದಲ್ಲಿ `ಸುಂದೋಪಸುಂದ’ ಎಂಬ ಪೌರಾಣಿಕ ಯಕ್ಷಗಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ನಾರಾಯಣ್ ಎಸ್. ಹೇಳಿದರು.
ಮಕ್ಕಳೆ ಹೆಚ್ಚಾಗಿ ಯಕ್ಷಗಾನವನ್ನು ನಡೆಸಿಕೊಡಲಿದ್ದಾರೆ. ಯಕ್ಷಕವಿ ಹೂಸ್ತೋಟ ಮಂಜುನಾಥ್ ಭಾಗವತರ ನೆನಪು ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿಯೇ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪರಿಸರ ಪ್ರಿಯರಿಗಾಗಿ 21 ತುಳಸಿ ಸಸಿಗಳನ್ನು ಕೂಡ ವಿತರಿಸಲಾಗುವುದು. ಈ ಕಾರ್ಯಕ್ರಮಕ್ಕೂ ಸಹ ಯಕ್ಷಾಭಿಮಾನಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ಆ.ಪ.ರಾಮಭಟ್, ದತ್ತಮೂರ್ತಿ ಭಟ್, ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು.