ಶಿವಮೊಗ್ಗ ನ್ಯೂಸ್…

ನವೆಂಬರ್ 14 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 12 ವರ್ಷಗಳ ನಂತರ ಸದಸ್ಯತ್ವ ಅಭಿಯಾನವನ್ನು ಗಂಭೀರವಾಗಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡಿದೆ ಎಂದರು.ನ. 14 ರಂದು ನಡೆಯಲಿರುವ ಸದಸ್ಯತ್ವ ಅಭಿಯಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಎಲ್ಲಾ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಲ್ಲಾ ಘಟಕಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.

ನ. 19 ರಿಂದ ಜಿಲ್ಲೆಯಲ್ಲೂ ಕೂಡ ಸದಸ್ಯತ್ವ ಅಭಿಯಾನವನ್ನು ಎರಡು ತಿಂಗಳುಗಳ ಕಾಲ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದರು.ಹಗರಣಗಳ ಗೂಡು ಬಿಜೆಪಿ:ಬಿಜೆಪಿ ಈಗ ಹಗರಣಗಳ ಗೂಡಾಗಿದೆ. ಬಿಟ್ ಕಾಯಿನ್ ಭ್ರಷ್ಟಾಚಾರ ಪಕ್ಷವನ್ನು ಸುತ್ತಿಕೊಂಡಿದೆ. ಹ್ಯಾಕರ್ ಶ್ರೀಕೃಷ್ಣ ಎಂಬಾತ ಹ್ಯಾಕ್ ಮಾಡಿ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡಿದ್ದಾನೆ. ನಂತರ ಈ ಭ್ರಷ್ಟಾಚಾರ ಮತ್ತು ಲೂಟಿಯ ಹಿಂದೆ ಬಿಜೆಪಿ ನಾಯಕರು ಇದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ಈಗಾಗಲೇ ಬಿಜೆಪಿಯಲ್ಲಿ ತಲ್ಲಣ ಉಂಟು ಮಾಡಿರುವ ಈ ಪ್ರಕರಣ ಕರ್ನಾಟಕ ಸರ್ಕಾರವನ್ನು ಉರುಳಿಸುತ್ತದೆ ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ ಎಂದು ಸುಂದರೇಶ್ ಹೇಳಿದರು.ಈ ಪ್ರಕರಣದಿಂದ ಜಾರಿಕೊಳ್ಳಲು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಮುಖಡರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಒಂದು ಪಕ್ಷ ಕಾಂಗ್ರೆಸ್ ನಲ್ಲಿ ಯಾರಾದರೂ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದರೆ ಶಿಕ್ಷಯಾಗಲಿ ಬಿಡಿ. ಆದರೆ, ಈಗಾಗಲೇ ಬಿಜೆಪಿಯಲ್ಲಿರುವ ನಾಯಕರ ಹೆಸರು ಕೇಳಿಬಂದಿರುವುದರಿಂಧ ಮತ್ತು ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ತನಿಖೆ ಮಾಡಿರುವ ಹಿನ್ನಲೆಯಲ್ಲಿ ಈ ಹಗರಣವನ್ನು ಯಾವುದೇ ಕಾರಣಕ್ಕೆ ಮುಚ್ಚಿ ಹೋಗಲು ಬಿಡದೇ ಮತ್ತಷ್ಟು ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದರು.

ಈ ಬಿಟ್ ಕಾಯಿನ್ ಹಗರಣದಲ್ಲಿ ನಮ್ಮ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕರು ಅಥವಾ ಅವರ ಮಕ್ಕಳು ಇರುವ ಸಂಶಯ ಕಂಡು ಬರುತ್ತಿದೆ. ಆದ್ದರಿಂದ ಈ ಬಗ್ಗೆಯೂ ತನಿಖೆ ಮಾಡಬೇಕು. ಒಟ್ಟಾರೆ ಈ ಇಡೀ ಪ್ರಕರಣ ಬಿಜೆಪಿ ಸರ್ಕಾರವನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಬಿಡಬಾರದು ಎಂದರು.ಮೋದಿ ಸರ್ಕಾರಕ್ಕೆ ಜನರು ಎರಡನೇ ಬಾರಿ ಮತ ಹಾಕಿ ಗೆಲ್ಲಿಸಿದ್ದಾರೆ. ಇದರಿಂದ ಅವರ ಧಿಮಾಕು ಹೆಚ್ಚಿದೆ. ಹಣವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬಲ್ಲಿಗೆ ಬಂದು ನಿಂತಿದ್ದಾರೆ. ಹಣ ಕ್ರೋಢೀಕರಣಕ್ಕಾಗಿ ಭ್ರಷ್ಟಾಚಾರಕ್ಕೆ ಕೈಹಾಕಿದ್ದಾರೆ. ಕಾರ್ಪೋರೇಟರ್ ಗಳಿಗೆ ಮಣೆ ಹಾಕಿ ಅವರ ಹಣದಿಂದಲೇ ಚುನಾವಣೆ ನಡೆಸುತ್ತಿದ್ದಾರೆ. ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನು ಸಹ ಖರೀದಿ ಮಾಡುವಷ್ಟು ಕೆಟ್ಟ ಸಂಸ್ಕೃತಿಗೆ ಬಿಜೆಪಿ ಬಂದು ನಿಂತಿದೆ. ಈ ವಿಷಯವನ್ನು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಪಕ್ಷ ಪಾದಯಾತ್ರೆಗಳ ಮೂಲಕ ರಾಜ್ಯದ ಮನೆಮನೆಗೆ ತಲುಪಿಸುತ್ತೇವೆ ಎಂದರು.ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟ:ಮಹಾನಗರ ಪಾಲಿಕೆ ಸಮಸ್ಯೆಗಳು, ಮೆಗ್ಗಾನ್ ಆಸ್ಪತ್ರೆ ಸಮಸ್ಯೆ, ಸ್ಮಾರ್ಟ್ ಸಿಟಿ, ಆಶ್ರಯ ಮನೆಗಳು ಮುಂತಾದ ವಿಷಯಗಳನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತನ್ನ ಹೋರಾಟ ಮುಂದುವರೆಸಲಿದೆ. ಮೆಗ್ಗಾನ್ ಆಸ್ಪತ್ರೆಯಂತೂ ಸಮಸ್ಯೆಗಳ ಗೂಡಾಗಿದೆ. ಅಲ್ಲಿನ ಸಿಮ್ಸ್ ನಿರ್ದೇಶಕರ ಬದಲಾವಣೆ ಅತಿಬೇಗನೆ ಆಗಬೇಕಾಗಿದೆ. ಹಾಗೆಯೇ ಪಾಲಿಕೆ ಆಯುಕ್ತರನ್ನು ಬದಲಾವಣೆ ಮಾಡಬೇಕಾಗಿದೆ. ಆಶ್ರಯ ಸಮಿತಿ ಅವ್ಯವಹಾರಗಳನ್ನು ಬಯಲಿಗೆಳೆಯಬೇಕಾಗಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿನ ನೂರಾರು ಸಮಸ್ಯೆ ಬಗೆಹರಿಯಬೇಕಾಗಿದೆ. ಕಾಂಗ್ರೆಸ್ ಪಕ್ಷ ಈ ಎಲ್ಲದರ ವಿರುದ್ಧ ಮಹಾನಗರ ಪಾಲಿಕೆಯಲ್ಲಿ ಮತ್ತು ಬಹಿರಂಗವಾಗಿ ತನ್ನ ಹೋರಾಟ ಮುಂದುವರೆಸಲಿದೆ ಎಂದರು.ಈಶ್ವರಪ್ಪನವರಿಗೆ ಬೈಯುವುದೇ ಒಂದು ಕೆಲಸ:ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸಿದ್ಧರಾಮಯ್ಯರನ್ನು ಬೈಯುವುದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಶಿವಮೊಗ್ಗ ನಗರದ ಸಮಸ್ಯೆಗಳು ಅವರಿಗೆ ಗೊತ್ತಿಲ್ಲ. ಪೂಜೆ, ಓಡಾಟ ಮತ್ತು ಧಾರ್ಮಿಕ ಭಾವನೆಗಳನ್ನು ಮುಗ್ಧ ಜನರಲ್ಲಿ ಬಿತ್ತಿ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಅವರ ಉದ್ಯೋಗವಾಗಿದೆ. ತಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಎಂಬುದೇ ಮರೆತು ಹೋದಂತಿದೆ. ಯಾವ ಇಚ್ಛಾಶಕ್ತಿಯೂ ಅವರಿಗೆ ಉಳಿದಿಲ್ಲ ಎಂದು ಟೀಕಿಸಿದರು.ವಿಧಾನ ಪರಿಷತ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಆರ್. ಪ್ರಸನ್ನಕುಮಾರ್ ಹಾಗೂ ವೈ.ಹೆಚ್. ನಾಗರಾಜ್ ಆಕಾಂಕ್ಷಿಗಳಿದ್ದು, ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ನ ಪಾತ್ರ ಇರುವುದಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಅವರು, ಈ ಹಿನ್ನಲೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತನ್ನ ಸಂಘಟನಾ ಶಕ್ತಿಯನ್ನು ಮತ್ತಷ್ಟು ಬೆಳೆಸಿಕೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಹೆಚ್.ಸಿ. ಯೋಗೀಶ್, ರೇಖಾ ರಂಗನಾಥ್, ಶಾಮೀರ್ ಖಾನ್, ಜಿಲ್ಲಾ ಕಾಂಗ್ರೆಸ್ ಆಡಳಿತ ಉಸ್ತುವಾರಿ ಸಿ.ಎಸ್ ಚಂದ್ರಭೂಪಾಲ್, ಪ್ರಮುಖರಾದ ಚಂದನ್, ನಾಗರಾಜ್, ಅಬ್ದುಲ್ ರೆಹಮಾನ್ ಮುಂತಾದವರು ಇದ್ದರು.  

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…