ಶಿವಮೊಗ್ಗ ನ್ಯೂಸ್…

ಆರ್‌ಎಸ್‌ಎಸ್‌ನಂತಹ ಪ್ರಬುದ್ಧ ಸಂಘಟನೆಯ ಪ್ರಮುಖರು ಸಂಸದ ಬಿ.ವೈ.ರಾಘವೇಂದ್ರ ಅವರ ಅಣತಿಯಂತೆ ಎಡಪಂಥೀಯ ಸಿದ್ದಾಂತದ ಡಿ.ಬಿ.ಶಂಕರಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಲು ಮುಂದಾಗಿರುವುದು ದುರಂತದ ಸಂಗತಿ. ರಾಷ್ಟ್ರಭಕ್ತರ ಹಿಂದೂ ಪರ ಸಂಘಟನೆಯವರು ಚುನಾವಣೆಗೂ ಮುನ್ನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರಿಗೆ ನೀಡಿರುವ ಬೆಂಬಲವನ್ನು ವಾಪಾಸ್ ಪಡೆಯದಿದ್ದರೆ ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಂಡಂತೆ ಎಂದು ರಾಷ್ಟ್ರೀಯ ಹಿಂದೂಸ್ಥಾನ ಸೇನಾದ ಜಿಲ್ಲಾ ಸಂಚಾಲಕ ಶ್ರೀಕಾಂತ್‌ಜಿ.ಭಟ್ ತಿಳಿಸಿದರು.

ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ, ಇದೇ ತಿಂಗಳು ೨೧ನೇ ತಾರೀಖು ನಡೆಯಲಿರುವ ಕಸಾಪ ಚುನಾವಣೆಗೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಅಭ್ಯರ್ಥಿಗಳು ಸ್ವರ್ಧಿಸಿದ್ದಾರೆ. ಅದರಲ್ಲಿ ಹಾಲಿ ಅಧ್ಯಕ್ಷರೂ ಆದ ಡಿ.ಬಿ.ಶಂಕರಪ್ಪ ಕೂಡ ಒಬ್ಬರು , ಇವರು ತಮಗೆ ದೊರಕಿದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದರೆ ಇಂದು ಅವರು ಕಂಡ ಕಂಡವರ ಮುಂದೆ ದೈನೇಸಿ ಸ್ಥಿತಿಯಲ್ಲಿ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆರೋಪಿಸಿದರು.

ಇತ್ತೀಚೆಗೆ ನಗರದ ಶಾಲೆಯೊಂದರಲ್ಲಿ ಸಂಸದ ರಾಘವೇಂದ್ರ, ಆರ್‌ಎಸ್‌ಎಸ್ ಮುಖಂಡರು ಸಭೆ ನಡೆಸಿ ಡಿ.ಬಿ. ಶಂಕರಪ್ಪನವರಿಗೆ ಬೆಂಬಲ ಸೂಚಿಸಿರುವುದನ್ನು ಖಂಡಿಸುತ್ತೇವೆ. ಎಡಪಂಥೀಯ ಸಿದ್ದಾಂತದ ಶಂಕರಪ್ಪನವರಿಗೆ ಆರ್‌ಎಸ್‌ಎಸ್ ಯಾವ ಕಾರಣದಿಂದ ಬೆಂಬಲ ನೀಡಿದೆ. ಇವರಿಂದ ಆರ್‌ಎಸ್‌ಎಸ್, ಬಜರಂಗದಳ ಮುಂತಾದ ಸಂಘಟನೆಗಳಿಗೆ ಏನು ಉಪಯೋಗ ಆಗಿದೆ? ಲಿಂಗಾಯತ ಎಂಬ ಒಂದೇ ಕಾರಣಕ್ಕೆ ಸಂಸದರು ಹಿಂದೂಪರ ಸಂಘಟನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಇಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು
ಸದಾ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರ ಹಿಂದೆ ಮುಂದೆ ಸುತ್ತಾಡುವುದಕ್ಕೆ ಇವರು ಮತ್ತೊಮ್ಮೆ ಅಧ್ಯಕ್ಷರಾಗಬೇಕಾ..?

ಸದಾ ಸಾಹಿತ್ಯ ಗ್ರಾಮ ಹೆಸರಿನಲ್ಲಿ ಮಾತನಾಡುತ್ತಾ ಕಾಲ ಕಳೆದಿದ್ದಾರೆ. ಇವರು ಈ ಹಿಂದಿನ ಅವಧಿಯಲ್ಲಿ ಕಡಿದು ಕಟ್ಟೆ ಕಟ್ಟಿದ್ದು ಸಾಹಿತ್ಯ ಆಸಕ್ತರಿಗೆ, ಕ.ಸಾಪ. ಸದಸ್ಯರಿಗೆ ಗೊತ್ತಿದೆ. ಶಂಕರಪ್ಪನವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದವರು. ಅಲ್ಲಿ ಇವರ ಆಟ ನಡೆಸಲು ಸಾಧ್ಯವಾಗದೇ ನಮ್ಮ ಜಿಲ್ಲೆಗೆ ಬಂದು ಸುಸಂಸ್ಕೃತ ಸಾಹಿತ್ಯ ಪರಿಷತ್ತನ್ನು ಜಾತಿ ಲಾಬಿಯಿಂದ ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ ಎಂದರು
ನಾವೆಲ್ಲರೂ ಪ್ರತಿನಿಧಿಸುವ ಸಾಹಿತ್ಯ ಪರಿಷತ್ತಿಗೆ ನಿಜವಾದ ಸಾಹಿತಿ ಅಧ್ಯಕ್ಷರಾದರೆ ಅದಕ್ಕೊಂದು ಶೋಭೆ ತರುತ್ತದೆ ಅದು ಬಿಟ್ಟು ಜಾತಿ ಲಾಬಿ ನಡೆಸುವವರು, ಪರಿಷತ್ತಿಗೆ ದ್ರೋಹ ಬಗೆದವರು ಅಧ್ಯಕ್ಷರಾದರೆ ಪರಿಷತ್ತಿನ ಮಾನ ಮರ್ಯಾದೆ ಸಂತೆಯಲ್ಲಿ ಹರಾಜು ಹಾಕಿದಂತಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಉತ್ತಮರನ್ನು ಆಯ್ಕೆ ಮಾಡೋಣ. ಕನ್ನಡದ ತೇರನ್ನು ಎಳೆಯೋಣ ಎಂದು ಕಸಾಪಾದ ಅಜೀವ ಸದಸ್ಯರಾದ ಶ್ರೀಕಾಂತ್ ಭಟ್ ತಿಳಿಸಿದರು.

ಭದ್ರಾವತಿ ಮೂಲದ ಹಾಗೂ ಪ್ರಜಾರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರೂ ಆದ ಬಿ.ರಮೇಶ್ ಮಾತನಾಡಿ, ಜಾತಿ, ಧರ್ಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮತ ಬೀಳುವುದಿಲ್ಲ. ಸಾಹಿತ್ಯ ಪರಿಷತ್ ನಮ್ಮ ನಡುವಿನ ಸಾಹಿತ್ಯದ ಚಟುವಟಿಕೆಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಜಾತಿ ಹೆಸರಿನಲ್ಲಿ ಮತ ಕೇಳುವವರನ್ನು ದೂರವಿಡಿ, ಕನ್ನಡ ಸಾಹಿತ್ಯವನ್ನು ಉಳಿಸಿ ಎಂದು ತಿಳಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…