ಶಿವಮೊಗ್ಗ ನ್ಯೂಸ್…

ಶಿವಮೊಗ್ಗದ ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶ್ರೀ ಈಶ್ವರಾನಂದಶ್ರೀಗಳ ಅದ್ದೂರಿ ಪುರಪ್ರವೇಶ
ಶಿವಮೊಗ್ಗ: ಶ್ರೀ ಬೀರಲಿಂಗೇಶ್ವರ ದೇವಾಲಯ ಸೇವಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಕನಕ ಲೇಔಟ್‍ನಲ್ಲಿ ನಿರ್ಮಾಣಗೊಂಡಿರುವ  ಶ್ರೀ ಬೀರಲಿಂಗೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಕ್ರವಾರ ಸಾಯಂಕಾಲ ವಿದ್ಯುಕ್ತ ಚಾಲನೆ ದೊರೆತಿದ್ದು, ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಅದ್ದೂರಿ ಪುರಪ್ರವೇಶ ನಡೆಯಿತು.

ಸಂಜೆ 5 ಗಂಟೆಗೆ ವಿನೋಬನಗರದ ಶಿವಾಲಯದಿಂದ ಶ್ರೀ ಬೀರಲಿಂಗೇಶ್ವರ ದೇವಾಲಯದ ವರೆಗೆ ಪರಮಪೂಜ್ಯರನ್ನು 108 ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಶ್ರೀಗಳೊಂದಿಗೆ ಹರಮಘಟ್ಟದ ಶ್ರೀ ಬೀರದೇವರು, ಬೊಮ್ಮನಕಟ್ಟೆಯ ಶ್ರೀ ಕೆಂಚಮ್ಮ, ಕಾಶೀಪುರದ ಶ್ರೀ ದುರ್ಗಮ್ಮ, ಮಾದನಬಾವಿಯ ಶ್ರೀ ಬೀರದೇವರು, ಹರಳಹಳ್ಳಿಯ ಶ್ರೀ ಬೀರದೇವರು, ಶಿವಾಲಯದ ಶ್ರೀ ಈಶ್ವರ  ಮುಂತಾದ ದೇವಾಲಯಗಳ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.
ಆಕರ್ಷಕ ಡೊಳ್ಳು ಕುಣಿತ, ವೀರಗಾಸೆ, ಮಂಗಳವಾದ್ಯದ ತಂಡಗಳೊಂದಿಗೆ ಸಾವಿರಾರು ಭಕ್ತ ಸಮೂಹ ಪಾದಯಾತ್ರೆಯೊಂದಿಗೆ ದೇವಾಲಯಕ್ಕೆ ಆಗಮಿಸಿತು.

ನಂತರ ಗೋಧೂಳಿ ಲಗ್ನದಲ್ಲಿ ಗೋಮಾತಾ ಸಹಿತ ಗಂಗಾಪರಮೇಶ್ವರಿಯೊಂದಿಗೆ ಆಲಯ ಪ್ರವೇಶ, ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಾಹ, ನಾಂದಿ ಹಾಗೂ ರಾಕ್ಷೋಘ್ನಹೋಮ ಮತ್ತು ಬಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀಗಳಿಂದ ಆಶೀರ್ವಾದ ಪಡೆದರು. ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಜಾತ್ರೆಯ ವಾತಾವರಣವಿತ್ತು. ಅನ್ನಸಂತರ್ಪಣೆ ಕಾರ್ಯಕ್ರಮವಿತ್ತು.
ನಾಳೆ ಬೆಳಿಗ್ಗೆ (ದಿನಾಂಕ: 13-11-2021ನೇ ಶನಿವಾರ) ಬೆಳಿಗ್ಗೆ 10 ಗಂಟೆಯಿಂದ ವಿವಿಧ ಮಹಿಳಾ ಮಂಡಳಿಯಿಂದ ಭಜನಾಮೃತ ಕಾರ್ಯಕ್ರಮವಿರಲಿದೆ. ಸಂಜೆ 4 ಗಂಟೆಗೆ ಮಹಾಗಣಪತಿ ಸಮೇತ ಉಮಾ ಮಹೇಶ್ವರ, ಲಕ್ಷ್ಮೀನಾರಾಯಣ, ಅಷ್ಟಲಕ್ಷ್ಮೀ, ನವಗ್ರಹ ಸಮೇತ ಮೃತ್ಯುಂಜಯ, ಸಪ್ತಸಭಾ ದೇವತಾ ಅಷ್ಟದಿಕ್ಪಾಲಕ ದೇವತಾ ಸಮೇತ ಪ್ರಧಾನ ದೇವತೆಗಳ ಕಳಶ ಪೂಜೆಗಳು ನೆರವೇರಲಿವೆ.
ನಂತರ ಸಂಜೆ 4 ಗಂಟೆಗೆ ದೇವಾಲಯದ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿದ ದಾನಿಗಳಿಗೆ ಸ್ವಾಮೀಜಿಗಳಿಂದ ಸನ್ಮಾನ ಕಾರ್ಯಕ್ರಮವಿರುತ್ತದೆ. ಇದೇ ಸಂದರ್ಭದಲ್ಲಿ ಉಪನ್ಯಾಸಕ ಲಿಂಗದಹಳ್ಳಿ ಹಾಲಪ್ಪ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿ ಕೋರಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…