ಶಿವಮೊಗ್ಗ ನ್ಯೂಸ್…
ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ ವತಿಯಿಂದ ನಿನ್ನೆ ಛೇಂಬರ್ ಆಫ್ ಕಾಮರ್ಸ್ ಆವರಣದಲ್ಲಿ ಟೈಲರ್ಸ ಸಂಘಟನಾ ಹಾಗೂ ಸದಸ್ಯತ್ವ ಕಾರ್ಡ್ ವಿತರಣೆ ಸಮಾರಂಭ ನೆಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಕೆ.ಎಸ್.ಟಿ.ಎ. ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ.ಎಸ್. ಆನಂದ್, ಟೈಲರ್ಸ್ಗಳು ಇಂದು ತುಂಬಾ ಸಂಕಟದಲ್ಲಿದ್ದಾರೆ. ಕೋವಿಡ್ ಸಂದರ್ಭದಲ್ಲಂತೂ ಅವರ ಬವಣೆ ಮತ್ತಷ್ಟು ಹೆಚ್ಚಿತ್ತು. ಆದರೆ, ಸರ್ಕಾರದಿಂದ ಸಿಗಬೇಕಾದ ಯಾವ ಸೌಲಭ್ಯಗಳೂ ಸಿಗದೇ ಹೋದದ್ದು ದುರದೃಷ್ಟಕರ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಾವು ಸಂಘಟಿತರಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.
ಜವಳಿ ಉದ್ಯಮ ಇಂದು ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಸಿದ್ಧ ಉಡುಪುಗಳು ಮಾರುಕಟ್ಟೆಗೆ ಬಂದು ಟೈಲರ್ಸ್ಗಳ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಅದೃಷ್ಟವಶಾತ್ ಅದಿನ್ನೂ ನಿಂತಿಲ್ಲ. ಈಗಲೂ ಬಟ್ಟೆ ಹೊಲಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಅದರಲ್ಲಿ ಹೆಣ್ಣುಮಕ್ಕಳ ಉಡುಪುಗಳು ಅಷ್ಟೊಂದು ಸಿದ್ಧ ಉಡುಪಾಗಿ ಸಿಗುವುದಿಲ್ಲ. ಈ ಅವಕಾಶಗಳನ್ನು ನಮ್ಮ ವೃತ್ತಿನಿರತ ಟೈಲರ್ ಗಳು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಬೇರೆ ಬೇರೆ ವೃತ್ತಿಯವರಿಗೆ ಸರ್ಕಾರ ಅನೇಕ ಯೋಜನೆಗಳನ್ನ ಪ್ರಕಟಿಸಿದೆ. ಟೈಲರ್ ಗಳಿಗೂ ಸಹ ಕಲ್ಯಾಣ ನಿಧಿಯನ್ನ ಸ್ಥಾಪಿಸಬೇಕು. ನಿವೃತ್ತಿವೇತನ, ಇಎಸ್ಐ ಆಸ್ಪತ್ರೆ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನ ನೀಡಬೇಕು. ಈ ಸೌಲಭ್ಯಗಳು ಸಿಗಬೇಕು ಎಂದರೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಸಮಾಜ ಚಿಂತನೆಯ ಜೊತೆಗೆ ವೃತ್ತಿ ಕೌಶಲ್ಯವನ್ನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬಿ.ವಸಂತ್, ಕಾರ್ಮಿಕ ಇಲಾಖೆ ಉಪ ಅಧಿಕಾರಿ ಭೀಮೇಶ್, ಕರ್ನಾಟಕ ರೇಷ್ಮೆ ಉದ್ಯಮಗಳ ನಿರ್ದೇಶಕ ಜೆ.ಪಿ. ವಿಜಯಕುಮಾರ್, ಟೈಲರ್ಸ್ ಸಂಘದ ಜಿಲ್ಲಾಧ್ಯಕ್ಷ ನೂರ್ ಮೊಹಮ್ಮದ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಯಂತ್, ಪ್ರಮುಖರಾದ ಗುಜ್ಜರ್, ಅಚ್ಯುತರಾವ್ ಮುಂತಾದವರು ಇದ್ದರು.