ಶಿವಮೊಗ್ಗ ನ್ಯೂಸ್…
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿವತಿಯಿಂದ ನ.18 ರಂದು ಮಧ್ಯಾಹ್ನ 3.30ಕ್ಕೆ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನಸ್ವರಾಜ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ನೇತೃತ್ವವನ್ನು ಸಚಿವ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಇಡೀ ಸಮಾವೇಶವನ್ನು ಡಾ. ಅಶ್ವತ್ಥನಾರಾಯಣ ಹಾಗೂ ವಿನಯ್ ಬಿದರೆ ನಿರ್ವಹಿಸಲಿದ್ದಾರೆ. ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂನ ಬಿಜೆಪಿಯ ಎಲ್ಲಾ ಮತದಾರರರು, ಅಪೇಕ್ಷಿತರು, ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು. ಜನಸ್ವರಾಜ್ ಸಮಾವೇಶ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇದರ ನೇತೃತ್ವವನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಎಸ್.ಟಿ. ಸೋಮಶೇಖರ್, ಶಂಕರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಹಿಸಿದ್ದಾರೆ. ಇವರ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದ್ದು, ಪರಿಷತ್ ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಇವರು ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಮಾಯಕೊಂಡ, ಹೊನ್ನಾಳಿ ಹಾಗೂ ಚನ್ನಗಿರಿ ವಿಧಾನ ಸಭಾ ಕ್ಷೇತ್ರಗಳು ಸೇರಲಿವೆ. ಹೀಗಾಗಿ ಅಲ್ಲಿನ ಮೂವರು ಶಾಸಕರು, ಒಬ್ಬರು ಸಂಸದರು, ಶಿವಮೊಗ್ಗದ ಆರು ಕ್ಷೇತ್ರಗಳ ಶಾಸಕರು ಹಾಗೂ ಸಂಸದರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ. ಕಳೆದ ಬಾರಿ ಬಿಜೆಪಿಯ ಹೆಚ್ಚು ಶಾಸಕರು ಇರಲಿಲ್ಲ. ಆದರೆ ಈ ಬಾರಿ ಭದ್ರಾವತಿ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂದರು. ದಾವಣಗೆರೆ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಈ ಕ್ಷೇತ್ರದಲ್ಲಿ 4172 ಮತದಾರರಿದ್ದಾರೆ. 1800 ಗ್ರಾಪಂ ಸದಸ್ಯರು ಬಿಜೆಪಿ ಕಾರ್ಯಕರ್ತರಿದ್ದಾರೆ. ಪಟ್ಟಣ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆೆ, ನಗರ ಸಭೆಗಳಲ್ಲಿಯೂ ಬಿಜೆಪಿ ಸದಸ್ಯರು ಹೆಚ್ಚಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು. ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಎಲ್ಲಾ ರೀತಿಯ ಯತ್ನ ನಡೆಸಲಾಗುತ್ತಿದೆ. ಮಂಡಲಗಳಲ್ಲಿ ಪ್ರಮುಖರ ಸಭೆ ನಡೆಸಲಾಗಿದೆ. ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರಗಳಲ್ಲಿ ಸಭೆ ನಡೆಸಲಾಗುತ್ತದೆ. ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಿಂದ ಒಂಭತ್ತು ಜನರ ಹೆಸರನ್ನು ರಾಜ್ಯ ಸಮಿತಿಗೆ ಕಳಿಸಿ ಕೊಡಲಾಗಿದೆ. ರಾಜ್ಯ ಸಮಿತಿ ಅವುಗಳನ್ನು ಪರಿಶೀಲಿಸಿ ಕೆಲವು ಹೆಸರುಗಳನ್ನು ಮಾತ್ರ ಕೇಂದ್ರ ಸಮಿತಿಗೆ ಕಳಿಸಿ ಕೊಡಲಿದೆ. ಯಾರ ಹೆಸರನ್ನು ಕೇಂದ್ರ ಸಮಿತಿ ಅಂತಿಮ ಮಾಡುತ್ತದೆ ಎಂಬುದು ಗೊತ್ತಿಲ್ಲ. ಅತೀ ಶೀಘ್ರದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಆದೇಶ ಹೊರಡಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಶ್ರೀನಾಥ್, ಧರ್ಮಪ್ರಸಾದ್, ಶಿವರಾಜ್, ಅಣ್ಣಪ್ಪ ಕೆವಿ., ಸುಧೀಂದ್ರ ಕಟ್ಟೆ ಇದ್ದರು.