ಶಿವಮೊಗ್ಗ ನ್ಯೂಸ್…

ಸರ್ಕಾರಿ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗದ ಶಾಖೆ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್’ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ ನಾರಾಯಣ್ ಅವರು ಇತ್ತೀಚಿಗೆ ಹೇಳಿಕೆ ಕೊಟ್ಟಿದ್ದರು. ಆದರೆ ಈಗ ಸರಕಾರ ಕೆಲವು ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶವನ್ನು ಹೊರಡಿಸಿದೆ.ಇದರಿಂದಾಗಿ ಇಂಜಿನಿಯರಿಂಗ್ ಓದುವ ಕನಸು ಕಂಡಿರುವ ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುವಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರಕಾರಿ ಕೋಟಾದ ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿನಿಂದ ೮೩,೫೨೬ ರೂ ಹಾಗೂ ೯೦,೦೬೦ ರೂ ಗಳಿಗೆ ನಿಗದಿಪಡಿಸಲಾಗಿದೆ. ಹಿಂದಿನ ವರ್ಷ ಈ ಶುಲ್ಕವು ೫೮,೮೦೬ ರೂ ಹಾಗೂ ೬೫,೩೪೦ ರೂ ( ವಿಶ್ವವಿದ್ಯಾಲಯ ಶುಲ್ಕವನ್ನು ಒಳಗೊಂಡಂತೆ) ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರವು ೨೦೨೧ – ೨೦೨೨ ನೇ ಸಾಲಿನಿಂದ ೨೦,೦೦೦ ರೂ ಕಾಲೇಜುಗಳ ಇತರ ಶುಲ್ಕ ಹಾಗೂ ಸ್ತ್ರೀಲ್ ಲ್ಯಾಬ್ ಸೌಲಭ್ಯಕ್ಕಾಗಿ ೧೦,೦೦೦ ರೂ ರಿಂದ ೨೦,೦೦೦ ರೂಪಾಯಿವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ನೀಡಿದೆ. ಇದರಿಂದಾಗಿ ೪೦ ಸಾವಿರ ರೂಪಾಯಿವರೆಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಯು ನೀಡಬೇಕಾಗಿದೆ ಎಂದು ದೂರಿದರು.

ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಕಾಲೇಜುಗಳಲ್ಲಿ ಈ ರೀತಿ ಹೆಚ್ಚಿನ ಶುಲ್ಕಗಳನ್ನು ಪಡೆಯದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಕಡಿವಾಣ ಹಾಕಲಾಗಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ಸರ್ಕಾರವೇ ಈ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಕಾಲೇಜುಗಳಿಗೆ ನೀಡುತ್ತಿದೆ. ಅದೇ ರೀತಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಶುಲ್ಕಗಳಿಗೂ ಹಾಗೂ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜಿನ ಶುಲ್ಕಗಳಿಗೂ ೪೦ ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ.

ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪೋಷಕರಿಗೆ ಸರ್ಕಾರ ಪರೋಕ್ಷವಾಗಿ ಹೆಚ್ಚಳ ಮಾಡಿರುವ ಶುಲ್ಕ ಹೊರೆಯಾಗಲಿದೆ ಎಂದು ದೂರಿದರು.ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಲಕರ ಮತ್ತು ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಪ್ರವೀಣ್, ಸಂದೀಪ್, ಉಷಾ, ಲಕ್ಷ್ಮೀ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…