ಶಿವಮೊಗ್ಗ ನ್ಯೂಸ್…
ಖ್ಯಾತ ಕೊಂಕಣಿ ಸಾಹಿತಿ ಮತ್ತು ಕನ್ನಡ ಪಂಡಿತ ಮಂದರ್ಕೆ ಮಾಧವ ಪೈ(92) ಅವರು ಇಂದು ನಿಧನರಾಗಿದ್ದಾರೆ. ಮೂವರು ಗಂಡು ಮಕ್ಕಳು ಮತ್ತು ಕುಟುಂಬಸ್ಥರನ್ನು ಅವರು ಅಗಲಿದ್ದಾರೆ.
1950 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಕನ್ನಡ ಎಂಎ ಪದವಿ ಪಡೆದ ಇವರು ಮೈಸೂರು ವಿವಿಯಿಂದ ಮತ್ತು ಅಲಹಾಬಾದ್ ಹಿಂದಿ ವಿದ್ಯಾಲಯದಿಂದ ಹಿಂದಿ ಸಾಹಿತ್ಯರತ್ನ ಮತ್ತು ರಾಷ್ಟ್ರಭಾಷ ಪ್ರವೀಣ ಪ್ರಶಸ್ತಿ ಪಡೆದಿದ್ದರು. ಕನ್ನಡ ಮತ್ತು ಕೊಂಕಣಿ ಭಾಷೆಯ ನಿಘಂಟನ್ನು ರಚಿಸಿದ ಮಾಧವ ಪೈ ಅವರು ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ, ಹಿಂದಿ, ಕೊಂಕಣಿ ಭಾಷೆಯ ಸಾಹಿತ್ಯವನ್ನು ಭಾಷಾಂತರಿಸಿದ್ದಾರೆ. ಕೊಡಿಯಾಳ್ ಕಬರ್ ಎಂಬ ಕೊಂಕಣಿ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನ ಬರೆಯುತ್ತಿದ್ದ ಇವರು ಬೇರೆ ಭಾಷೆಯ ಅನೇಕ ಕೃತಿಗಳನ್ನು ಕೊಂಕಣಿಗೆ ತರ್ಜುಮೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಲವು ವಿಶ್ವವಿದ್ಯಾಲಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಅರವಿಂದರು ಬರೆದ ಕೃತಿಯನ್ನು ಸಾವಿತ್ರಿ ಎಂಬ ಹೆಸರಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಕ್ಕೆ ಅವರಿಗೆ ಕನ್ನಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ಕೊಂಕಣಿ ಶಬ್ಧ ರತ್ನಾಕರ ಎಂದೇ ಹೆಸರು ಪಡೆದ ಇವರು ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನಕ್ಕೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಕನ್ನಡ ಮತ್ತು ಕೊಂಕಣಿ ಸಾಹಿತ್ಯಾಭಿಮಾನಿಗಳು ಮತ್ತು ಗೌಡ ಸಾರಸ್ವತ ಸಮಾಜ ಸಂತಾಪ ವ್ಯಕ್ತಪಡಿಸಿದೆ.(ಫೋಟೋ ಇದೆ)