ಶಿವಮೊಗ್ಗ ನ್ಯೂಸ್…

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರೈತ ವಿರೋಧಿ ೩ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸತ್ಯಾಗ್ರಹ ಒಂದು ವರ್ಷ ಪೂರೈಸುತ್ತಿದ್ದು, ಈ ರೈತ ಚಳುವಳಿಯ ವರ್ಷಾಚರಣೆಯನ್ನು ನ.೨೬ರಂದು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಪ್ರತಿರೋಧ ವ್ಯಕ್ತಪಡಿಸುವ ಮೂಲಕ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ವರಿಷ್ಠ ನಾಯಕ ಕೆ.ಟಿ.ಗಂಗಾಧರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ರಚನೆಯಾಗಿರುವ ಸರ್ಕಾರ ರೈತರ ನ್ಯಾಯ ಸಮ್ಮತವಾದ ಹಕ್ಕಿನ ಹೋರಾಟಕ್ಕೆ ಸ್ಪಂದಿಸಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಬದಲಾಗಿ ಪ್ರಜಾತಂತ್ರವನ್ನು ಗಾಳಿಗೆ ತೂರಿ ಇಡೀ ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗಲೇ ಸುಗ್ರೀವಾಜ್ಞೆಗಳ ಮೂಲಕ ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ತನ್ನ ಹೊಣೆಗೇಡಿತನವನ್ನು ಪ್ರದರ್ಶಿಸಿದೆ ಎಂದರು.ರೈತರ ಸತ್ಯಾಗ್ರಹ ಆರಂಭವಾದ ದಿನದಿಂದಲೂ ಕೇಂದ್ರ ಸರ್ಕಾರ ಸತ್ಯಾಗ್ರಹವನ್ನು ದಿಕ್ಕು ತಪ್ಪಿಸಲು, ಸತ್ಯಾಗ್ರಹ ನಡೆಸುವ ಸ್ಥಳದ ಸುತ್ತಲು ದೊಡ್ಡ-ದೊಡ್ಡ ಕಂದಕಗಳನ್ನು ತೆಗೆಯಲಾಗಿತ್ತು, ಸತ್ಯಾಗ್ರಹಿಗಳು ಭಾಗವಹಿಸದಂತೆ ರಸ್ತೆಗೆ ಮೊಳೆಗಳನ್ನು ಹೊಡೆಯಲಾಯಿತು.

ಶಾಂತಿಯುತವಾಗಿ ನಡೆಸುತ್ತಿದ್ದ ಗಣ ರಾಜ್ಯೋತ್ಸವ ಟ್ರಾಕ್ಟರ್ ಪೆರೇಡನ್ನು ದಿಕ್ಕು ತಪ್ಪಿಸಿ, ರೈತ ಸತ್ಯಾಗ್ರಹಿಗಳಿಗೆ ದೇಶ ದ್ರೋಹಿಗಳೆಂದು ಹಣೆ ಪಟ್ಟಿ ಕಟ್ಟಲಾಯಿತು. ಪೋಲಿಸರಿಂದ ಸತ್ಯಾಗ್ರಹವನ್ನು ಹತ್ತಿಕ್ಕಲು ಲಾಟಿ ಪ್ರಹಾರ ನಡೆಸಿ ಜಲ ಪಿರಂಗಿ ದಾಳಿ, ಅಶ್ರುವಾಯು ಸೆಲ್‌ಗಳನ್ನು ಸಿಡಿಸಿ, ಗೂಂಡಾ ವರ್ತನೆ ಪ್ರದರ್ಶಿಸಿತು. ಬಿಜೆಪಿ ಸರ್ಕಾರದ ಮುಖ್ಯಸ್ಥನ ಮಕ್ಕಳೇ, ಸತ್ಯಾಗ್ರಹಿಗಳ ಮೇಲೆ, ಕಾರು ಹರಿಸಿ, ಕೊಲೆ ಮಾಡಿಸಿ ಹೇಯ ಕೃತ್ಯವನ್ನು ಪ್ರದರ್ಶಿಸಿತು. ಸರ್ಕಾರದ ಈ ಎಲ್ಲಾ ಕೃತ್ಯಗಳನ್ನು ಈ ದೇಶದ ಸರ್ವೋಚ್ಚ ನ್ಯಾಯಲಯವು ಖಂಡಿಸಿ ಈ ಸರ್ಕಾರಕ್ಕೆ ಛೀಮಾರಿ ಹಾಕಿದ್ದರೂ, ಸರ್ಕಾರ ಎಚ್ಚೆತ್ತುಕೊಳ್ಳದಿರುವುದನ್ನು ಗಮನಿಸಿದಾಗ ಇದೊಂದು ಸಂವಿಧಾನ ವಿರೋಧಿ ಸರ್ಕಾರ ಎಂದು ಸಾಬೀತಾಗುತ್ತದೆ ಎಂದರು.

ಸತ್ಯಾಗ್ರಹವನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಎಲ್ಲಾ ಯತ್ನಗಳನ್ನೂ ಅಹಿಂಸೆ ಮತ್ತು ಶಾಂತಿ ಮಾರ್ಗದಿಂದಲೇ ವಿಫಲ ಗೊಳಿಸಿದ ರೈತ ಚಳುವಳಿ ನ್ಯಾಯ ಸಮ್ಮತವಾದ, ಸತ್ಯ ಮಾರ್ಗದಲ್ಲಿ ನಡೆದು ಒಂದು ವರ್ಷವನ್ನು ಪೂರೈಸಿ ಮುನ್ನುಗ್ಗುತ್ತಿದ್ದು, ನ.೨೬ರಂದು ಶಿವಮೊಗ್ಗದ ಎಂಆರ್‌ಎಸ್ ವೃತ್ತದಲ್ಲಿ ಮಧ್ಯಾಹ್ನ ೧೨ರಿಂದ ಸಂಜೆ ೪ ಗಂಟೆಯವರೆಗೆ ಜಿಲ್ಲೆಯ ರೈತರು ಜಾನುವಾರುಗಳು, ಟ್ಯಾಕ್ಟರ್, ಟಿಲ್ಲರ್, ದವಸ ಧಾನ್ಯದೊಂದಿಗೆ ಚಳುವಳಿಯಲ್ಲಿ ಭಾಗವಹಿಸಿ ಕಾಯ್ದೆಗಳನ್ನು ಪ್ರತಿರೋಧ ವ್ಯಕ್ತಪಡಿಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಕಿವಿ ಹಿಂಡಿ ಬುದ್ದಿ ಹೇಳುವ  ಕೆಲಸ ಮಾಡಲಿದ್ದಾರೆ ಎಂದರು.ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ  ರೈತರು ಜಾನುವಾರುಗಳು, ಟ್ಯಾಕ್ಟರ್, ಟಿಲ್ಲರ್, ದವಸ ಧಾನ್ಯದೊಂದಿಗೆ ರಸ್ತೆ ಮೇಲೆ ಚಳುವಳಿ ನಡೆಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಆರ್.ಸಣ್ಣರಂಗಪ್ಪ, ಜಗದೀಶ್‌ನಾಯಕ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…