ಶಿವಮೊಗ್ಗ ನ್ಯೂಸ್…

ಮಂತ್ರಾಲಯದ ಶ್ರೀಗಳಾದ ಸುಬುಧೇಂದ್ರ ತೀರ್ಥರು ಹಾಗೂ ಅವರ ಅನುಯಾಯಿಗಳು, ನವ ವೃಂದಾವನದಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ರಘುವರ್ಯ ತೀರ್ಥರ ವೃಂದಾನವನ್ನು ಶ್ರೀ ಜಯತೀರ್ಥರ ವೃಂದಾವನ ಎಂದು ಆಪಾದಿಸಿ, ಅದನ್ನು ಕಬಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಉತ್ತರಾದಿ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಗೋಪಿನಾಥ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧವಾಗಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನವ ವೃಂದಾವನ ಗಡ್ಡಿ, ಅನೆಗುಂದಿಯಲ್ಲಿ ಮಾಧ್ವಪರಂಪರೆಗೆ ಸೇರಿದ ಒಂಭತ್ತು ಯತಿವರೇಣ್ಯರಾದ ಶ್ರೀ ಪದ್ಮನಾಭ ತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ವಾಗೀಶ ತೀರ್ಥರು, ಶ್ರೀ ವ್ಯಾಸರಾಜ ತೀರ್ಥರು, ಶ್ರೀ ರಘುವರ್ಯ ತೀರ್ಥರು, ಶ್ರೀ ಶ್ರೀನಿವಾಸ ತೀರ್ಥರು, ಶ್ರೀ ರಾಮ ತೀರ್ಥರು, ಶ್ರೀ ಸುಧೀಂದ್ರ ತೀರ್ಥರು ಹಾಗೂ ಶ್ರೀ ಗೋವಿಂದ ಒಡೆಯರ್ರವರ ವೃಂದಾವನಗಳಿದ್ದು, ಈ ಪೈಕಿ ರಘುವರ್ಯ ತೀರ್ಥರು ಉತ್ತರಾದಿ ಮಠದ ಪರಂಪರೆಯಲ್ಲಿ ಬಂದವರು ಎಂದರು ವಿವರಿಸಿದರು.

ಈ ಒಂಭತ್ತು ವೃಂದಾವನಗಳ ಪೈಕಿ ಶ್ರೀ ಪದ್ಮನಾಭ ತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ವಾಗೀಶ ತೀರ್ಥರ ಪೂಜಾ-ಆರಾಧನೆಗಳ ಕುರಿತಾಗಿ ವಿವಾದಗಳಿವೆ. ಉಳಿದ ಯತಿಗಳು ಹಾಗೂ ಆರಾಧನೆ ಕುರಿತಾಗಿ ಯಾವುದೇ ರೀತಿಯ ವಿವಾದಗಳಿಲ್ಲ. ಆದರೆ, ಈಗ ಉತ್ತರಾದಿ ಮಠಕ್ಕೆ ಸೇರಿದ ಯತಿಗಳಾದ ಶ್ರೀ ರಘವರ್ಯ ತೀರ್ಥರ ವೃಂದಾವನ್ನು ಶ್ರೀ ಜಯತೀರ್ಥರ ವೃಂದಾವನ ಎಂಬುದಾಗಿ ಆಪಾದಿಸಿ, ಅಲ್ಲಿ ಶ್ರೀ ಜಯತೀರ್ಥರ ಆರಾಧನೆ, ಪೂಜೆ ಮಾಡಲು ಮಂತ್ರಾಲಯ ರಾಯರ ಮಠದ ಅನುಯಾಯಿಗಳು, ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಶ್ರೀ ಮಠದ  ಪೀಠಾಽಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ನೇರ ಹಾಗೂ ಪರೋಕ್ಷ ಕುಮ್ಮಕ್ಕು ಇದೆ. ಈ ಮೂಲಕ ಶ್ರೀ ರಘುವರ್ಯ ತೀರ್ಥರ ವೃಂದಾವನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದು ನೇರವಾಗಿ ಆರೋಪಿಸಿದರು.

ವಾಸ್ತವವಾಗಿ ಶ್ರೀ ಜಯತೀರ್ಥರ ವೃಂದಾವನವು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮೇಳಖೇಡದಲ್ಲಿದೆ. ಇದು ಸರ್ಕಾರಿ ದಾಖಲೆಗಳಲ್ಲಿ, ಗುಲ್ಬರ್ಗಾ ಗೆಜಿಟಿಯರ್‌ಗಳಲ್ಲಿ ಅಷ್ಟೇ ಅಲ್ಲದೇ, ಸ್ವತಃ ವಿಜಯದಾಸರೇ ತಮ್ಮ ಕೃತಿಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.  ಇತಿಹಾಸ ತಜ್ಞರೂ ಕೂಡಾ ಇದೇ ಅಭಿಪ್ರಾಯದಲ್ಲಿದ್ದಾರೆ ಎಂದ ಅವರು, ಬಹಳ ಮುಖ್ಯವಾಗಿ, ಮಂತ್ರಾಲಯ ಶ್ರೀ ರಾಯರ ಮಠದ ಪೂರ್ವ ಪೀಠಾಽಪತಿಗಳು, ಅಧಿಕಾರಿಗಳು ನ್ಯಾಯಲಯಕ್ಕೆ ನೀಡಿದ ಹೇಳಿಕೆ ಅರ್ಜಿಗಳಲ್ಲಿಯೂ ನವ ವೃಂದಾವನದಲ್ಲಿ ಶ್ರೀ ಉತ್ತರಾದಿ ಮಠದ ಶ್ರೀ ರಘುವರ್ಯ ತೀರ್ಥರ ಮೂಲ ವೃಂದಾವನ ಎಂದೇ ಸ್ಪಷ್ಟಪಡಿಸಿದ್ದಾರೆ.

ಇಷ್ಟೆಲ್ಲಾ ಇದ್ಯಾಗ್ಯೂ ಈಗ ಮಂತ್ರಾಲಯ ಮಠದ ಶ್ರೀಗಳು ಮತ್ತು ಅವರ ಅನುಯಾಯಿಗಳು ಶ್ರೀ ರಘುವರ್ಯ ತೀರ್ಥರ ವೃಂದಾವನ್ನು ಶ್ರೀ ಜಯತೀರ್ಥರ ವೃಂದಾವನ ಎಂದು ಹೇಳುತ್ತಿರುವುದು ಭಕ್ತರ ದಾರಿ ತಪ್ಪಿಸುವ ಹುನ್ನಾರ ಎಂದು ಆಪಾದಿಸಿದರು.ಶ್ರೀ ಮಂತ್ರಾಲಯ ಮಠದ ಮೇಲೆ ಗೌರವ ಇಟ್ಟುಕೊಂಡೇ, ಅಲ್ಲಿ ನಡೆಯುತ್ತಿರುವ ಈ ಹುನ್ನಾರವನ್ನು ಅತ್ಯಂತ ಗಂಭೀರವಾಗಿ ಉತ್ತರಾದಿ ಮಠ ವಿರೋಧಿಸುತ್ತದೆ ಎಂದ ಅವರು, ಭಕ್ತಾದಿಗಳು ಈ ರೀತಿಯ ಹುನ್ನಾರಗಳಿಗೆ ಬೆಲೆ ಕೊಡದೇ ಇತಿಹಾಸ, ಪರಂಪರೆಗೆ ಅಪಚಾರ ಎಸಗುವ ಕೃತ್ಯವನ್ನು ಖಂಡಿಸಬೇಕು. ಮಂತ್ರಾಲಯ ಶ್ರೀಗಳು ತಾವು ಮತ್ತು ತಮ್ಮ ಶಿಷ್ಯರು, ಅನುಯಾಯಿಗಳಿಗೆ ಈ ಕೃತ್ಯವನ್ನು ಮುಂದುವರಿಸದಂತೆ ಸೂಚಿಸಬೇಕು ಎಂದು ಮನವಿ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…