ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಪ್ರಸನ್ನಕುಮಾರ್ ಸ್ಪರ್ಧಿಸಿದ್ದು ಅವರ ಗೆಲುವು ಖಚಿತ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಈಗಾಗಲೇ ಪ್ರಸನ್ನಕುಮಾರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದೆ. ಆದ್ದರಿಂದ ಮತಯಾಚನೆ ಕೂಡ ಆರಂಭವಾಗಿದೆ. ತೀರ್ಥಹಳ್ಳಿ ಸೇರಿದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳಲ್ಲಿಯೂ ಕೂಡ ಪ್ರಸನ್ನಕುಮಾರ್ ಪ್ರವಾಸ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲೂ ಕೂಡ ಅವರು ಪ್ರಚಾರ ಮಾಡಿದ್ದು, ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಬಿಜೆಪಿಗಿಂತ ಮುನ್ನಡೆಯಲ್ಲಿದ್ದಾರೆ ಎಂದರು.ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ದ್ವಿತೀಯ ಸ್ಥಾನದಲ್ಲಿತ್ತು.

ಈಗ ಮಧು ಬಂಗಾರಪ್ಪ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ. ಸೊರಬದಲ್ಲಿ ನಿಸ್ಸಂದೇಹವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ. ಜೊತೆಗೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ನಮ್ಮ ಸಹಾಯಕ್ಕೆ ಬರಲಿದೆ. ಈ ಬಾರಿ ಅವರ ಕೋಮುವಾದಿತನ, ಧಾರ್ಮಿಕ ನಂಬಿಕೆಗಳ ಮುಂದಿಟ್ಟುಕೊಂಡು ಮತ ಕೇಳುವುದು,, ಕೊಂಡುಕೊಳ್ಳುವುದು ಇವು ನಡೆಯುವುದಿಲ್ಲ. ಶಿವಮೊಗ್ಗ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ನಾವು ಈ ಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.ಮೋದಿ ಸರ್ಕಾರದ ಹೇಡಿತನ:ಕೃಷಿ ಕಾಯ್ದೆಗಳನ್ನು ಮೋದಿ ಸರ್ಕಾರ ವಾಪಸ್ ತೆಗೆದುಕೊಳ್ಳು 750 ಜೀವಗಳು ಬಲಿಯಾಗಬೇಕಾಯಿತು. ಜನ ವಿರೋಧಿ ಕಾಯ್ದೆಗಳನ್ನು ಹೋರಾಟದ ಮೂಲಕವೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಈ ದೇಶಕ್ಕೆ ಬಂದಿರುವುದು ಅತ್ಯಂತ ದುರಂತವಾಗಿದೆ ಎಂದ ಕಿಮ್ಮನೆ ರತ್ನಾಕರ್, ಇದೊಂದು ಮೋದಿಯ ಹೇಡಿತನವಾಗಿದೆ. ಅವರಿಗೆ ಹೃದಯವೇ ಇಲ್ಲ. ಕಣ್ಣು, ಕಿವಿ, ಸೂಕ್ಷ್ಮ ಸಂವೇದನೆ ಮೊದಲೇ ಇಲ್ಲ.

750 ಜನರ ಬಲಿದಾನದ ಮೇಲೆ ಈಗ ಕೃಷಿ ಕಾಯ್ದೆ ರದ್ದು ಮಾಡಿರುವುದು ಕೂಡ ಸ್ವಾರ್ಥದ ಹಿನ್ನಲೆಯಲ್ಲಿ. ಲೋಕಸಭೆ ಚುನಾವಣೆಯೂ ಸೇರಿದಂತೆ 5 ರಾಜ್ಯಗಳ ವಿಧಾನ ಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು ರದ್ದು ಮಾಡಿದ್ದಾರೆ ಅಷ್ಟೇ. ಇದರಲ್ಲಿ ಬೇರೆ ಯಾವ ಅಂತಃಕರಣವೂ ಇಲ್ಲ. ರೈತರ ಮೇಲೆ ಪ್ರೀತಿಯೂ ಇಲ್ಲ ಎಂದರು.ಕೇಂದ್ರ ಸರ್ಕಾರ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನು ಕೊಂದ ಪಾಪದಲ್ಲಿದೆ. ಅವರ ಕುಟುಂಬಗಳಿಗೆ ತಕ್ಷಣವೇ 25 ಲಕ್ಷ ರೂ. ಪರಿಹಾರ ನೀಡಬೇಕು. ಇನ್ನಾದರೂ ಜಾತಿ, ಧರ್ಮ, ಕೋಮುವಾದಿತನ ಬಿಡಬೇಕು. ಈಗಾಗಲೇ ಮೋದಿ ಭಕ್ತರು ಬಿಟ್ ಕಾಯಿನ್ ಗೆ ಸಂಬಂಧಪಟ್ಟಂತೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದರು. ಈಗ ಅದೇ ಮೋದಿಯವರು ಸಭೆ ಕರೆದಿರುವುದು ಏಕೆ? ಎಂದು ಪ್ರಶ್ನೆ ಮಾಡಿದ ಅವರು, ಈ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಗೆ ಮಾತ್ರ ಗೃಹಮಂತ್ರಿಯಾಗಿದ್ದಾರೆ. ಅಲ್ಲಿ ತಮ್ಮ ಬಾಲಬಡುಕರಿಗೆ ಸಹಾಯ ಮಾಡುತ್ತಾ ಮತ್ತಷ್ಟು ಅಪರಾಧಗಳು ಹೆಚ್ಚುವಂತೆ ಮಾಡುತ್ತಿದ್ದಾರೆ. ಅವರ ವಿರೋಧಿಗಳಿಗೆ ಸಲ್ಲದ ಕೇಸ್ ಗಳನ್ನು ಹಾಕುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಸೇರಿದಂತೆ ಇಡೀ ತೀರ್ಥಹಳ್ಳಿಯಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ಸಾಗುತ್ತಿವೆ.

ಆರಗ ಜ್ಞಾನೇಂದ್ರ ನಮ್ಮ ಗೃಹ ಮಂತ್ರಿ ಎಂಬ ಧಿಮಾಕು ಅವರ ಕಾರ್ಯಕರ್ತರಿಗಿದೆ. ಇನ್ನಾದರೂ ಈ ಎಲ್ಲದರಿಂದ ದೂರ ಇದ್ದು ತೀರ್ಥಹಳ್ಳಿಯನ್ನು ರಕ್ಷಿಸುವ ಕೆಲಸದಲ್ಲಿ ಮುಂದಾಗಬೇಕು ಎಂದರು.ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆಯಂತಹ ಕೆಟ್ಟ ಲೇಖಖರು ಕಾಂಗ್ರೆಸ್ ನಾಯಕರುಗಳನ್ನು ಅತ್ಯಂತ ಕೆಟ್ಟದ್ದಾಗಿ  ಬಿಂಬಿಸುತ್ತಿದ್ದಾರೆ. ಅವರ ಬರಹಗಳೇ ಅವರ ವ್ಯಕ್ತಿತ್ವವನ್ನು ಅವರ ಮುಖಕ್ಕೆ ರಾಚುವಂತೆ ಇವೆ. ಈ ಬಿಜೆಪಿಗೆ ಅಂಬೇಡ್ಕರ್, ಗಾಂಧಿ ಎಂದೆಂದಿಗೂ ಪ್ರತಿಸ್ಪರ್ಧಿಯೇ ಆಗಿದ್ದಾರೆ. ಗಾಂಧಿಯನ್ನು ಶತ್ರುವಿನಂತೆ ಕಾಣುವ ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳು ಈ ದೇಶಕ್ಕೆ ಏನನ್ನು ಕೊಡುತ್ತವೆ. ಹಾಗಾಗಿ ಗಾಂಧಿವಾದಿಯಾಗಿದ್ದ ಅಂಬೇಡ್ಕರ್ ಅವರನ್ನು ಕೂಡ ಇವರು ಸಹಿಸಿಕೊಳ್ಳುವುದಿಲ್ಲ ಎಂದು ಟೀಕಿಸಿದರು.ರಾಜ್ಯದಲ್ಲಿ ಯಾವ ಸಂದರ್ಭದಲ್ಲಿ ರಾಜಕಾರಣ ಮತ್ತು ಅಧಿಕಾರ ಸ್ಥಾನ ಪಲ್ಲಟವಾಗುತ್ತೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ಸರ್ಕಾರ ಬರುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ತಂತ್ರ ಕುತಂತ್ರಗಳು ಇಲ್ಲಿ ವಿಜೃಂಭಿಸಿದ್ದವು. ಈಗ ಆ ಯಡಿಯೂರಪ್ಪನವರೂ ಇಲ್ಲವಾಗಿದ್ದಾರೆ. ಅವರನ್ನು ಅಧಿಕಾರದಿಂದ ಇಳಿಸಿ ಮನೆಗೆ ಕಳಿಸಿದರೆ ಅವರು ಸುಮ್ಮನಾಗುತ್ತಾರೆ ಎಂಬ ನಂಬಿಕೆಯನ್ನು ಕೇಂದ್ರ ಬಿಜೆಪಿ ನಾಯಕರು ಮತ್ತು ರಾಜ್ಯದ ಕೆಲವು ಬಿಜೆಪಿ ನಾಯಕರು ಇಟ್ಟುಕೊಂಡಿದ್ದರು. ಆದರೆ, ಯಡಿಯೂರಪ್ಪನವರು ಮತ್ತೆ ಗುಡುಗುತ್ತಿದ್ದಾರೆ. ಕೆಜಪಿ ವಾಸನೆ ಎಲ್ಲಿಂದಲೋ ಬರುತ್ತಿದೆ. ಬೊಮ್ಮಾಯಿ ಸರ್ಕಾರ ಇಳಿದರೂ ಆಶ್ಚರ್ಯವೇನೂ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೇದಾ ವಿಜಯಕುಮಾರ್, ಕಲಗೋಡು ರತ್ನಾಕರ್, ಯಮುನಾ ರಂಗೇಗೌಡ, ಎನ್. ರಮೇಶ್, ಎಸ್.ಪಿ. ದಿನೇಶ್, ಕೆಸ್ತೂರು ಮಂಜುನಾಥ್, ದೇವಿ ಕುಮಾರ್, ರಾಘವೇಂದ್ರ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…