ಶಿವಮೊಗ್ಗ ನ್ಯೂಸ್…
ಮಳೆಯಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೂ ಅದನ್ನು ಗಮನಿಸದೆ ಆಡಳಿತಾರೂಢ ಬಿಜೆಪಿ ನಾಯಕರು ಜನ ಸ್ವರಾಜ ಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದ ಅನೇಕ ಕಡೆಗಳಲ್ಲಿ ಬೆಳೆ ನಷ್ಟವಾಗಿದೆ. ಭತ್ತ, ಅಡಿಕೆ, ಜೋಳ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಮನೆಗಳು ಕುಸಿದು ಜೀವ ಹಾನಿಯಾಗಿವೆ. ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಈ ಬಗ್ಗೆ ಸವಿಸ್ತಾರವಾದ ವರದಿ ಪಡೆದು ಪರಿಹಾರ ನೀಡಿ ಸಂಕಷ್ಟಕ್ಕೆ ಪರಿಹಾರ ನೀಡಬೇಕಾದವರು ಈಗ ಚುನಾವಣೆಗಾಗಿ ರಾಜ್ಯ ಪ್ರವಾಸ ಮಾಡುತ್ತಿರುವುದು ಅವರ ಬೇಜವಾಬ್ದಾರಿ ತೋರಿಸುತ್ತದೆ ಎಂದರು.ಕೇಂದ್ರಸ್ಥಾನದಲ್ಲಿದ್ದು, ಪರಿಸ್ಥಿತಿ ನಿಯಂತ್ರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರ್ಯಾರು ಕೇಂದ್ರ ಸ್ಥಾನದಲ್ಲಿಯೇ ಇರುತ್ತಿಲ್ಲ. ಅಧಿಕಾರಿಗಳೂ ಚುನಾವಣೆಯಲ್ಲಿ ಮಗ್ನರಾಗಿರುವುದರಿಂದ ರೈತರು ಹಾಗೂ ಜನಸಾಮಾನ್ಯರ ಗೋಳು ಕೇಳುವವರಿಲ್ಲ. ಬೆಳೆ, ಜೀವ, ಆಸ್ತಿಪಾಸ್ತಿ ಹಾನಿ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದರು. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಮೂರು ಕೃಷಿ ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿತ್ತು. ಇದರ ವಿರುದ್ಧ ರೈತರು, ಪ್ರತಿಪಕ್ಷಗಳು ಹೋರಾಟ ನಡೆಸಿದರೂ ಒಂದು ವರ್ಷದವರೆಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈಗ ಚುನಾವಣೆ ತಂತ್ರಗಾರಿಕೆಗಾಗಿ ವಾಪಸ್ ಪಡೆದಿದೆ . ಈ ಕಾಯಿದೆಗಳನ್ನು ಇದುವರೆಗೆ ಸಮರ್ಥಿಸಕೊಂಡ ಬಿಜೆಪಿಯವರು ಈಗ ಮುಜುಗರಕ್ಕೆ ಒಳಗಾಗುವಂತಾಗಿದೆ ಎಂದರು.
ರೈತರ ಪ್ರತಿಭಟನೆಯಿಂದಾಗಿ ನೂರಾರು ಕೋಟಿ ನಷ್ಟವಾಗಿದೆ. 700ಕ್ಕೂ ಹೆಚ್ಚು ಜೀವ ಹಾನಿಯಾಗಿದೆ. ದೆಹಲಿ ಮಾತ್ರವಲ್ಲದೆ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ. ಮೃತರ ಕುಟುಂಬದವರ ಸಂಬಂಧಿಗಳಿಗೆ ತಕ್ಷಣ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದರು.ರಾಜ್ಯದಲ್ಲಿ ಗುತ್ತಿಗೆದಾರರಿಂದ ಶೇ.40 ರಿಂದ 50 ರಷ್ಟು ಹಣ ಪಡೆಯಲಾಗುತ್ತಿದ್ದು, ಇದರಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿರುವುದು ಬಹಿರಂಗವಾಗಿದೆ. ಹೀಗಾಗಿ ಈ ಕಮೀಷನ್ ಸರ್ಕಾರವನ್ನು ಪ್ರಧಾನಿ ವಜಾ ಮಾಡಬೇಕೆಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಪ್ರತಿಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಮೆಹಕ್ ಶರೀಫ್, ಶಾಮೀರ್, ಮುಖಂಡರಾದ ಯು.ಶಿವಾನಂದ, ಚಂದ್ರಭೂಪಾಲ್, ನಾಗರಾಜ್, ಮೂರ್ತಿ ಮತ್ತಿತರರು ಇದ್ದರು.ಬಾಕ್ಸ್:ರೈತ ಕಾಯಿದೆಗಳನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ನಿಂ ದ ಇಂದು ಸಂಜೆ 6 ಗಂಟೆಗೆ ಶಿವಪ್ಪನಾಯಕ ವೃತ್ತದಿಂದ ಗೋಪಿವೃತ್ತದವರೆಗೆ ಕ್ಯಾಂಡಲ್ ಮೆರವಣಿಗೆ ನಡೆಸಲಾಗುತ್ತದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದರು.