ಕರ್ನಾಟಕ ನ್ಯೂಸ್…
ದಿನಾಂಕಃ-25-10-2021 ರಂದು ರಾತ್ರಿ ಸಮಯದಲ್ಲಿ ಶಿವಮೊಗ್ಗದ ಶಾದ್ ನಗರದ ವಾಸಿಯೊಬ್ಬರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಮೂರು ಜನರು ಮನೆಯ ಬಾಗಿಲು ಹಾಗೂ ಹೊರಗಿನ ಗೇಟ್ ಗೆ ಕಲ್ಲಿನಿಂದ ಹೊಡೆದಿದ್ದು, ನಂತರ ಅವರ ಮೊಬೈಲ್ ಗೆ ವಾಟ್ಸಪ್ ನಲ್ಲಿ ಕರೆ ಮಾಡಿ ನಾನು ಬಚ್ಚನ್ ಎಂದು ಹೇಳಿಕೊಂಡು, ಹಣಕ್ಕೆ ಬೇಡಿಕೆ ಇಟ್ಟು ಹಣವನ್ನು ನೀಡಿದಿದ್ದರೆ ನಿನ್ನ ಮಕ್ಕಳಿಗೆ ಹಾಗೂ ತಮ್ಮಂದಿರಿಗೆ ಹೊಡೆದು ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಜೀವಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 395/2021 ಕಲಂ 387, 427 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಂಜೀವ್ ಕುಮಾರ್, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಅಭಯ್ ಪ್ರಕಾಶ್ ಸೋಮನಾಳ್, ಪಿಐ ಕುಂಸಿ ರವರ ನೇತೃತ್ವದಲ್ಲಿ 02 ವಿಶೇಷ ತಂಡಗಳನ್ನು ರಚಿಸಿದ್ದು, ಸದರಿ ತಂಡಗಳ ನಿರಂತರ ಪ್ರಯತ್ನದಿಂದ ದಿನಾಂಕಃ-22-11-2021 ರಂದು ಆರೋಪಿ ಬಚ್ಚಾ @ ಜಮೀರ್ @ ಬಚ್ಚನ್ 29 ವರ್ಷ ವಾಸ ಟಿಪ್ಪುನಗರ ಶಿವಮೊಗ್ಗ ಈತನನ್ನು ಬಾಂಬೆ, ಮಹರಾಷ್ಟ್ರ ರಾಜ್ಯದಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ ಮತ್ತು ದಿನಾಂಕಃ- 16-11-2021 ರಂದು ಸದರಿ ಪ್ರಕರಣದ ಇನ್ನುಳಿದ ಆರೋಪಿತರಾದ 1) ಮಹಮದ್ ತೌಹಿದ್, 19 ವರ್ಷ, ಬಸವನಗುಡಿ ಶಿವಮೊಗ್ಗ ಮತ್ತು 2)ಮಹಮದ್ ಬಿಲಾಲ್, 21 ವರ್ಷ, ಬಸವನಗುಡಿ ಶಿವಮೊಗ್ಗ ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ. ಸದರಿ ಪ್ರಕರಣದಲ್ಲಿ ಆರೋಪಿತರಿಂದ 03 ಮೊಬೈಲ್ ಫೋನ್, 03 ಇಂಟರ್ ನೆಟ್ ಡಾಂಗಲ್ ಗಳು ಮತ್ತು 01 ವರ್ನಾ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಬಚ್ಚಾ @ ಜಮೀರ್ @ ಬಚ್ಚನ್ ನ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ 50 ಪ್ರಕರಣಗಳು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ಸೇರಿ ಒಟ್ಟು 53 ಪ್ರಕರಣಗಳು ದಾಖಲಾಗಿರುತ್ತವೆ. ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಯ ಹಲವು ಕೊಲೆ ಬೆದರಿಕೆ, ಮಾರಣಾಂತಿಕ ಹಲ್ಲೆ, ವಂಚನೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆ ಪ್ರಕರಣಗಳಲ್ಲಿ ಈತನು ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿರುತ್ತಾನೆ.