ಶಿವಮೊಗ್ಗ ನ್ಯೂಸ್…

ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ಮತ್ತು ಬ್ರಾಹ್ಮಣ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಬಣ) ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹಂಸಲೇಖ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂಬುದು ಬೂಟಾಟಿಕೆ. ಬಲಿತರ ಮನೆಗೆ ದಲಿತರನ್ನು ಕರೆತಂದು ಅವರಿಗೆ ಊಟ ಬಡಿಸಿ ಅವರ ತಟ್ಟೆ ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಮಾತನಾಡಿದ್ದರು. ಇದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ, ಕೇವಲ ಕೆಲವೇ ಮನುವಾದಿಗಳು ಇದು ಮನಸ್ಸಿಗೆ ಘಾಸಿ ಮಾಡಿದೆ. ಅವರು ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಧಮಕಿ ಹಾಕಿದ್ದರಿಂದ ಹಂಸಲೇಖ ಕ್ಷಮೆ ಕೋರಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.ಅಂಬೇಡ್ಕರ್ ಕೊಟ್ಟ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ. ನಮ್ಮ ಪ್ರಜಾಪ್ರಭುತ್ವ ಧರ್ಮಾಕ್ರಸಿ ಆಗುತ್ತದೆ ಎನ್ನುವ ಆತಂಕ ಜನಸಾಮಾನ್ಯರಿಗಿದೆ.

ಹಾಗೇನಾದರೂ ಆದರೆ ನಾವು ಮತ್ತೆ ಹಳೆಯ ಕಾಲಕ್ಕೆ ಬರುವಂತಾಗುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ಉಳಿಸಲು ನಾವು ಎಚ್ಚರದ ಹೆಜ್ಜೆಯನ್ನಿಡಬೇಕಾಗಿದೆ ಎಂದರು. ಶೇಕಡ 15 ರಷ್ಟು ಇರುವು ಮನುವಾದಿಗಳು ಶೇಕಡ 85 ರಷ್ಟು ಇರುವ ದಲಿತರು ಮತ್ತು ಹಿಂದುಳಿದವರು ಸ್ವಾಭಿಮಾನ ಕೆಣಕುತ್ತಿದ್ದು, ಇದೇ ಧೋರಣೆ ಮುಂದುವರೆದರೆ ಪ್ರತಿರೋಧ ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸಮಿತಿಯು ಹಂಸಲೇಖ ಅವರ ಹೇಳಿಕೆ ಬೆಂಬಲಿಸುತ್ತದೆ. ಹಾಗೂ ಅವರು ವಿರುದ್ದ ಹಾಕಿರುವ ಸುಳ್ಳು ಪ್ರಕರಣ ವಜಾಗೊಳಿಸಿ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಶಿವಬಸಪ್ಪ, ಎ. ಅರ್ಜುನ್, ಎಂ. ಏಳುಕೋಟಿ, ರಾಘವೇಂದ್ರ ಜೋಗಿಹಳ್ಳಿ, ಅತ್ತಿಗುಂದ ಕರಿಯಪ್ಪ, ಎಂ. ರವಿ ಹರಿಗೆ, ಎಂ. ರಮೇಶ್ ಚಿಕ್ಕಮರಡಿ ಸೇರಿದಂತೆ ಹಲವರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…