ಶಿವಮೊಗ್ಗ ನ್ಯೂಸ್…
ಸುವ್ಯವಸ್ಥಿತ ಸಮಾಜ ಕಟ್ಟಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ವಿಧಾನ ಪರಿಷತ್ ಚುನಾವಣೆ ಎದುರಿಸಲಾಗುವುದು ಎಂದು ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.
ಅವರು ಇಂದು ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರಕ್ಕೆ ಜೆಡಿಯು ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಅಲ್ಲದೇ, ಯಾವುದೇ ಚುನಾವಣೆಯಲ್ಲಿ ಹಣ, ಹೆಂಡ ಹಂಚದೇ ಚುನಾವಣೆ ಎದುರಿಸಿಲ್ಲ ಎಂದು ದೂರಿದರು.ರಾಜ್ಯದಲ್ಲಿ ಪರ್ಯಾಯ ರಾಜಕಾರಣ ಕಟ್ಟಲು ಹೊರಟಿದ್ದು, ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳೊಂದಿಗೆ ಒಟ್ಟಿಗೆ ಸೇರಿ ಪರ್ಯಾಯ ಪಕ್ಷವನ್ನು ಕಟ್ಟಲು ಚಿಂತನೆ ನಡೆಸಿದ್ದೇವೆ. ಇದರಿಂದಾಗಿ ರಾಜ್ಯದ ಜನತೆಗೆ ಹೊಸ ಸಂದೇಶ ನೀಡಲು ಹೊರಟಿದ್ದೇವೆ ಎಂದರು.ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನಮ್ಮ ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಶಶಿಕುಮಾರ್ ಗೌಡ ಅವರನ್ನು ಕಣಕ್ಕಿಳಿಸಿದ್ದು, ಹಣ, ಹೆಂಡ ಹಂಚದೇ ಚುನಾವಣೆ ಎದುರಿಸಲಾಗುವುದು. ಈಗಾಗಲೇ ಜೆಡಿಯು ಕೆ.ಆರ್.ಎಸ್.ಪಕ್ಷ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ರೈತಸಂಘದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಇತರೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಒಟ್ಟಿಗೆ ಸೇರಿ ಮುಂಬರುವ ಚುನಾವಣೆಗಳನ್ನು ಎದುರಿಸಲಾಗುವುದು ಎಂದರು. ಕೆ.ಆರ್.ಎಸ್.ಪಕ್ಷ(ಕರ್ನಾಟಕ ರಾಷ್ಟ್ರ ಸಮಿತಿ)ದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ನೀಚ ರಾಜಕಾರಣದಿಂದ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಲಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಾತೀತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹಣ, ಹೆಂಡ ಹಂಚದೇ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಚುನಾವಣೆ ಎದುರಿಸಲಾಗುವುದು. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.ನಮ್ಮ ಪಕ್ಷದ ವತಿಯಿಂದ ತುಮಕೂರು ಹಾಗೂ ಧಾರವಾಡ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ರಾಜ್ಯದಲ್ಲಿ ಬದಲಾವಣೆ ತರಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಒಟ್ಟಿಗೆ ಸೇರಿ ಮುಂಬರುವ 2023 ರ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುವುದು. ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ಸಹ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಪರ್ಯಾಯ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಗೌಡ, ಜೆಡಿಯು ಜಿಲ್ಲಾ ಸಂಚಾಲಕ ದೇವರಾಜ್ ಶಿಂಧೆ, ಜೆಡಿಯು ಅಭ್ಯರ್ಥಿ ಶಶಿಕುಮಾರ್ ಗೌಡ ಇದ್ದರು.ಪತ್ರಿಕಾಗೋಷ್ಠಿ ನಂತರ ಗಾಂಧಿ ಪಾರ್ಕ್ ಗೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ನಾಮಪತ್ರ ಸಲ್ಲಿಸಲಾಯಿತು.