ಬೆಂಗಳೂರು ನ್ಯೂಸ್…
ನವೆಂಬರ್ 22: ಅಕಾಲಿಕ ಮಳೆಯಿಂದಾಗಿ ರಾಜ್ಯದ ಹಾಗೂ ಬೆಂಗಳೂರು ನಗರದ ಜನರು ಪರಿತಪಿಸುತ್ತಿದ್ದರೆ ಜನರು ಹಾಗೂ ರೈತರ ಬಗ್ಗೆ ಯಾವುದೇ ಕಾಳಜಿ ತೋರಿಸದೇ ಇರುವ ಮುಖ್ಯಮಂತ್ರಿಗಳು ಕಾಮನ್ ಅಲ್ಲ ಕಾಸ್ಟ್ಲಿ ಮ್ಯಾನ್ ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಕಳೆದೊಂದು ವಾರದಿಂದ ರಾಜ್ಯದಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಾಜ್ಯದ ರೈತರು ತೀವ್ರ ತೊಂದರೆಗೀಡಾಗಿದ್ದಾರೆ. ಬೆಂಗಳೂರು ನಗರದಲ್ಲೂ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಇತರೆ ಮುಖ್ಯಮಂತ್ರಿಗಳು ಇಂತಹ ಸಂಧರ್ಭದಲ್ಲಿ ಮಳೆಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು.
ನವದೆಹಲಿಗೆ ತೆರಳುವ ಸಂಧರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ವಿಶೇಷ ವಿಮಾನ ವ್ಯವಸ್ಥೆ ಮಾಕೊಳ್ಳುವ ಸಿಎಂ, ಕನಿಷ್ಠ ಹೆಲಿಕ್ಯಾಪ್ಟರ್ ನಲ್ಲಾದರೂ ಸಮೀಕ್ಷೆ ಮಾಡಬಹುದಿತ್ತು. ರೈತರ ಸಹಾಯಕ್ಕೆ ಧಾವಿಸುವ ಬದಲಾಗಿ ನಮ್ಮ ಮುಖ್ಯಮಂತ್ರಿಗಳು ಬೆಂಗಳೂರು ನಗರದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಉಸ್ತುವಾರಿಯೂ ಆಗಿರುವ ಮುಖ್ಯಮಂತ್ರಿಗಳು ಇದುವರೆಗೆ ಒಂದೇ ಒಂದು ಬಾರಿ ಮಳೆಯಿಂದ ತೊಂದರೆಗೀಡಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರಕ್ಕೆ ಫ್ಲೈಯಿಂಗ್ ವಿಸಿಟ್ ಮಾಡಿದ್ದಾರೆ. ಇಂತಹ ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು ಕಾಮನ್ ಮ್ಯಾನ್ ಗಿರುವ ಬದ್ದತೆಯನ್ನು ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನಸಾಮಾನ್ಯರ ಮುಖ್ಯಮಂತ್ರಿ ನಾನು ಕಾಮನ್ ಮ್ಯಾನ್ ಎಂದು ತಮ್ಮ ಎದೆ ತಟ್ಟಿಕೊಂಡಿದ್ದ ಮುಖ್ಯಮಂತ್ರಿಗಳು ಬದ್ದತೆ ಕೇವಲ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದೋ ಎಂದು ಟೀಕಿಸಿದ್ದಾರೆ.