ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯು ಭಗವಂತನಿಗೆ ಸಮರ್ಪಿಸುವ ಪೂಜೆಯಾಗಿದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ರಾಜೇಂದ್ರ ನಗರದಲ್ಲಿರುವ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಚಿಂತನ ಕಾರ್ತಿಕ 2021ರ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆಯಲ್ಲಿ ಅಹಂಕಾರ ಸಲ್ಲದು. ಸಮಾಜದ ಪ್ರಗತಿಯಲ್ಲಿ ಎಲ್ಲರೂ ಭಾಗಿಯಾಗಲು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಂತನ ಕಾರ್ತಿಕ ಕಾರ್ಯಕ್ರಮವು ಭಕ್ತರ ಮನೆ ಮನಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸುತ್ತದೆ. ಎಲ್ಲಿ ಧಾರ್ಮಿಕ ಚಿಂತನೆಗಳು, ಭಕ್ತಿ ಗೌರವಗಳು ಇರುತ್ತದೋ ಅಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಲಭಿಸುತ್ತದೆ. ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಸಮಾಜದಲ್ಲಿ ಆತ್ಮಪೂರ್ವಕವಾಗಿ ಸೇವೆ ಸಲ್ಲಿಸಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಅವರು ನಿಜಾರ್ಪಣೆ ವಿಷಯ ಕುರಿತು ಮಾತನಾಡಿ, ಸೇವಾ ಕಾರ್ಯಗಳನ್ನು ಫಲಾಪೇಕ್ಷೆ ಇಲ್ಲದೇ ಮಾಡಬೇಕು. ನಮ್ಮನ್ನು ನಾವು ಸಮಾಜಕ್ಕೆ ಸೇವೆಗಳ ಮೂಲಕ ಸಮರ್ಪಿಸಿಕೊಂಡಾಗ ನಿಜವಾದ ಮುಕ್ತಿ ದೊರೆಯುತ್ತದೆ ಎಂದು ಹೇಳಿದರು.

ಡಿವಿಜಿ ಕವನದ ಬಗ್ಗೆ ವಿವರಣೆ ನೀಡಿದ ಅವರು ಮಾನವ ಜೀವನ ಸಾರ್ಥಕಗೊಳ್ಳಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಜ್ಞಾನದ ಬುತ್ತಿಯನ್ನು ವೃದ್ಧಿಗೊಳಿಸಿಕೊಳ್ಳಬೇಕು. ಚಿಂತನ ಕಾರ್ತಿಕ ಪ್ರತಿಯೊಬ್ಬರ ಮನಸ್ಸಿನ ಅಂಧಕಾರ ತೊಲಗಿಸಿ ಜ್ಞಾನದ ಬೆಳಕು ನೀಡುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸೇವೆಗಳ ಜತೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದರು.

ಅಕ್ಕನ ಬಳಗದ ವತಿಯಿಂದ ವಚನ ಮತ್ತು ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್‌ಚಂದ್ರ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ, ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…