ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಯೆ ನನ್ನ ಪ್ರಮುಖ ಗುರಿ ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಹೇಳಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಹಿರಿಯರ ಸಹಕಾರದೊಂದಿಗೆ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಂದು ಕಡೆ ಪ್ರಚಾರವೂ ಕೂಡ ಸಾಗುತ್ತಿದೆ. ಎಲ್ಲಾ ಕಡೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಅತ್ಯಂತ ಸುಲಭವಾಗಿ ಮೂರು ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕರ್ತರು ವಿಶೇಷವಾಗಿ ಈ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯೂ ಸೇರಿದಂತೆ ಒಟ್ಟು 10 ವಿಧಾನ ಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ಅದರಲ್ಲಿ 9 ಬಿಜೆಪಿ ಶಾಸಕರೇ ಇದ್ದಾರೆ. ಇವರೆಲ್ಲರೂ ಕೂಡ ಪ್ರಚಾರ ಕೈಗೊಂಡಿದ್ದಾರೆ. ಜೊತೆಗೆ ಪಕ್ಷದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರೂ ಕೂಡ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು, ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಹೇಳುವ ಮೂಲಕ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.ಶಿಕ್ಷಣ, ಆರೋಗ್ಯ, ಸ್ವಚ್ಛತೆ ಈ ಮೂರು ಇಂದು ಅತ್ಯಗತ್ಯವಾಗಿದೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾದುದು ನಮ್ಮ ಕರ್ತವ್ಯ ಕೂಡ ಆಗಿದೆ. ಹಾಗೆಯೇ ಆರೋಗ್ಯ ಮತ್ತು ಸ್ವಚ್ಛತೆಗೂ ಕೂಡ ನಾವು ಆದ್ಯತೆ ಕೊಡಬೇಕು. ತಾವು ಆಯ್ಕೆಯಾದರೆ ಈ ಮೂರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪ್ರಮುಖವಾಗಿ ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗವನ್ನು ತಲುಪಬೇಕಿದೆ.

ಇದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಸೌಲಭ್ಯಗಳು ಮತ್ತಷ್ಟು ಹೆಚ್ಚಲು ಅಗತ್ಯ ವಾತಾವರಣ ರೂಪಿಸಬೇಕು. ಸಾಧ್ಯವಾದರೆ, ಸೌಹಾರ್ದ ವೇದಿಕೆಗಳನ್ನು ಸ್ಥಾಪಿಸಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಮೂಲಭೂತ ಸಮಸ್ಯೆಗಳು ಕೂಡ ಹಾಗೆಯೇ ಉಳಿದುಕೊಂಡಿವೆ. ಬಗರ್ ಹುಕುಂ ಸಮಸ್ಯೆ ಇನ್ನೂ ಇದೆ. ಈ ಎಲ್ಲದಕ್ಕೂ ಪರಿಹಾರವ ಕಲ್ಪಿಸಲು ಬಿಜೆಪಿ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ ಎಂದರು.ತಮ್ಮ ಕ್ಷೇತ್ರದಲ್ಲಿ 4166 ಮತಗಳಿದ್ದು, ಇದರಲ್ಲಿ ಶೇಕಡ 93.5 ರಷ್ಟು ಗ್ರಾಮ ಪಂಚಾಯಿತಿ ಸದಸ್ಯರೇ ಇದ್ದಾರೆ. ಇನ್ನುಳಿದಂತೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯರಿದ್ದಾರೆ. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸಿದ್ದಾರೆ. ಒಂದು ಅಂದಾಜಿನಂತೆ ಮೂರು ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಗ್ರಾಮ ಪಂಚಾಯಿತಿಯಲ್ಲಿದ್ದಾರೆ. ಇವರೆಲ್ಲರೂ ಕೂಡ ಬಿಜೆಪಿಗೆ ಈಗಾಗಲೇ ದಂಡು ದಂಡಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆಗೆ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರೂ ಸಹ ಸೇರಿಕೊಂಡಿದ್ದಾರೆ. ಪ್ರಚಾರ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲರ ಸಹಕಾರ, ಸಹಾಯದಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಜೊತೆಗೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೂ ಹೆಚ್ಚು ಒತ್ತು ಕೊಡುತ್ತೇನೆ. ನಗರ ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಭದ್ರತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇವುಗಳನ್ನು ನಿವಾರಣೆ ಮಾಡಿ ಪ್ರತಿಯೊಬ್ಬರಿಗೂ ಆರೊಗ್ಯ ಕಾರ್ಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ವಿಸ್ತರಿಸಲು ನಾನು ಪ್ರಯತ್ನ ಪಡುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಈಗ ಒಂದು ಸಾವಿರ ರೂ. ಇದ್ದು ಅದನ್ನು ಎರಡು ಸಾವಿರ ರೂ.ಗೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹಾಗಾಗಿ ಜೆಡಿಎಸ್ ಬೆಂಬಲಿತ ಸದಸ್ಯರು ಕೂಡ ತಮ್ಮ ಪರವಾಗಿ ಇರುವುದಾಗಿ ಈಗಾಗಲೇ ತಿಳಿಸಿದ್ದಾರೆ. ಅವರ ನೆರವನ್ನು ಕೂಡ ತಾವು ಪಡೆಯುವುದಾಗಿ ಅರುಣ್ ತಿಳಿಸಿದರು.ಒಟ್ಟಾರೆ ಇಂದಿನಿಂದಲೇ ಚುನಾವಣಾ ಪ್ರಚಾರ ಬಿರುಸಾಗಿ ನಡೆಯಲಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವ ಕಾರ್ಯ ನಡೆದಿದೆ. ತಮ್ಮ ಗೆಲುವು ಖಚಿತವಾಗಿದೆ. ಉಳಿದ 11 ದಿನಗಳಲ್ಲಿ ಎಲ್ಲಾ 365 ಗ್ರಾಮ ಪಂಚಾಯಿತಿಗಳನ್ನು ನಾವು ತಲುಪುತ್ತೇವೆ ಎಂದರು.  ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಎಸ್. ದತ್ತಾತ್ರಿ, ಶಿವರಾಜ್, ಹೃಷಿಕೇಶ್ ಪೈ, ನಾಗರಾಜ್, ಪವಿತ್ರಾ ರಾಮಯ್ಯ, ಕೆ.ವಿ. ಅಣ್ಣಪ್ಪ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…