ಶಿವಮೊಗ್ಗ: ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಡೋಂಗ್ರೆ ಅವರನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದ್ದಾರೆ.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮ್ಯಾಮ್ ಕೋಸ್ ನಲ್ಲಿ ಅಧಿಕಾರಿಯಾಗಿದ್ದ ನಾಗೇಶ್ ಡೋಂಗ್ರೆಯವರು ಹಲವು ಆರೋಪಗಳನ್ನ ಹೊತ್ತಿದ್ದಾರೆ. ಅಮಾನತು ಸಹ ಆಗಿದ್ದರು. ಆದರೆ, ಆನಂತರ ಅವರನ್ನು ಸಹಕಾರ ಸಂಘಗಳ ನಿಬಂಧಕರನ್ನಾಗಿ ವರ್ಗಾವಣೆ ಮಾಡಲಾಯಿತು.
ನಾಗೇಶ್ ಡೋಂಗ್ರೆಯವರು ಅಲ್ಲಿಂದ ಮುಂಭಡ್ತಿ ಹೊಂದಿದ್ದರು ಕೂಡ ಮುಂಭಡ್ತಿಯನ್ನು ನಿರಾಕರಿಸಿ ಇಲ್ಲಿಯೇ ಉಳಿದಿದ್ದಾರೆ ಎಂದರು.ಶಿಮುಲ್ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿತವಾಗಿತ್ತು. ಆದರೆ, ಈ ಡೋಂಗ್ರೆಯವರು ಮಧ್ಯ ಪ್ರವೇಶ ಮಾಡಿ ‘ಕೊರೋನಾ ಇದೆ. ಸಿಬ್ಬಂದಿಗಳ ಕೊರತೆ ಇದೆ’ ಎಂಬೆಲ್ಲ ಕಾರಣಗಳನ್ನು ಹೇಳಿ ನವೆಂಬರ್ 20ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಬೇಕಂತಲೇ ಮುಂದೂಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲು ಈ ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಶಿಮುಲ್ ನ ಕಾಂಗ್ರೆಸ್ ನಿರ್ದೇಶಕರುಗಳಿಗೆ ನೋಟಿಸ್ ಕೊಡಲು ಹೊರಟಿದ್ದಾರೆ. ಅಲ್ಲದೆ ಕಾಂಗ್ರೆಸ್ ಸಹಕಾರಿ ಸದಸ್ಯರು ಗ್ರಾಮ ಪಂಚಾಯ್ತಿ ಸದಸ್ಯರು ಕೂಡ ಆಗಿದ್ದಾರೆ. ಸುಮಾರು 380ಕ್ಕೂ ಹೆಚ್ಚು ಸದಸ್ಯರು ಈ ಸಹಕಾರ ಕ್ಷೇತ್ರದಲ್ಲಿದ್ದಾರೆ. ಪ್ರಮುಖವಾಗಿ ವಿದ್ಯಾಧರ, ಆನಂದ್, ದುಗ್ಗಪ್ಪಗೌಡ ಸೇರಿದಂತೆ ಹಲವರನ್ನು ಬ್ಲಾಕ್ಮೇಲ್ ತಂತ್ರಕ್ಕೆ ಒಳಪಡಿಸಿ ಬಿಜೆಪಿಗೆ ಸಹಕಾರ ಕೊಡುವುದಾರೆ ನೋಟೀಸ್ ವಾಪಾಸ್ ತೆಗೆದುಕೊಳ್ಳುತ್ತೇನೆ ಎಂಬ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಡೋಂಗ್ರೆಯವರ ವಿರುದ್ಧ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ವತಿಯಿಂದ ನಾವು ಮನವಿ ಮಾಡುತ್ತಿದ್ದೇವೆ.
ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಚುನಾವಣೆಗೆ ಅವರನ್ನು ಯಾವರೀತಿಯಿಂದಲೂ ಬಳಸಿಕೊಳ್ಳಬಾರದು ಮತ್ತು ಈಗಾಗಲೇ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಕ್ಷೇತ್ರದ ಜಗದೀಶ್, ಕಾಂಗ್ರೆಸ್ನ ಹಿರಿಯ ಮುಖಂಡ ಎಲ್. ರಾಮೇಗೌಡ, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಂದ್ರಭೂಪಾಲ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಎನ್.ಡಿ. ಪ್ರವೀಣ್, ಪ್ರಮುಖರಾದ ಇಕ್ಕೇರಿ ರಮೇಶ್ ಉಪಸ್ಥಿತರಿದ್ದರು.