ಶಿವಮೊಗ್ಗ: ಹೊಂಗಿರಣ ತಂಡವು 25 ನೇ ವರ್ಷದ ಸವಿನೆನಪಿಗಾಗಿ 3 ವಿಭಿನ್ನ ನಾಟಕಗಳನ್ನು ಸಿದ್ದಗೊಳಿಸಲಾಗುತ್ತಿದ್ದು, ಜನವರಿ ತಿಂಗಳಲ್ಲಿ ಈ ಮೂರು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೊಂಗಿರಣ ತಂಡದ ಅಧ್ಯಕ್ಷ ಡಾ. ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡದ ಅತ್ಯಂತ ಹಳೆಯ ಕಥನ ಕಾವ್ಯವಾದ ಪುಣ್ಯಕೋಟಿಯನ್ನು ನೃತ್ಯ ರೂಪಕವಾಗಿ ಮಕ್ಕಳಿಗಾಗಿ ಸಿದ್ಧಗೊಳಿಸಲಾಗುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ಸಾಸ್ವೆಹಳ್ಳಿ ಸತೀಶ್ ವಿನ್ಯಾಸ ಮಾಡಿದ್ದು ಪ್ರತಿಭಾನ್ವಿತ ಕಲಾವಿದೆಯರಾದ ಸುಪ್ರಿಯ ರಾವ್ ನಿರ್ದೇಶನ ಮಾಡಿದರೆ, ಮಾನಸ ಸಂತೋಷ್ ಸಹನಿರ್ದೇಶನವಿದೆ ಎಂದರು.ಈ ನೃತ್ಯ ರೂಪಕದಲ್ಲಿ ಹೆಣ್ಣುಮಕ್ಕಳೇ ಪ್ರಮುಖವಾಗಿದ್ದು, ಪ್ರೌಢಶಾಲೆಯಿಂದ ಪದವಿಯವರೆಗೆ ಓದುತ್ತಿರುವ ಹೆಣ್ಣುಮಕ್ಕಳಿಗೆ ಅವಕಾಶವಿದೆ. ಆಸಕ್ತ ಪೆÇೀಷಕರು, ಮಕ್ಕಳು ಹೊಂಗಿರಣ ಸಂಸ್ಥೆಯವರನ್ನು ಸಂಪರ್ಕಿಸಬಹುದು. (9844367071, 8884929122, 8548039171) ಮೊದಲು ಬಂದ 20 ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಪೋಷಕರಿಂದ ಯಾವುದೇ ರೀತಿಯಲ್ಲೂ ಹಣ ಪಡೆಯುವುದಿಲ್ಲ ಆದರೆ ಪ್ರಾಕ್ಟಿಸ್ಗೆ ತಪ್ಪದೇ ಬರುವುದು, ಸಮಯಕ್ಕೆ ಬರುವುದು ಕಡ್ಡಾಯವಾಗಿರುತ್ತದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿಯನ್ನು ವಿಸ್ತರಿಸಿ ಕ್ರಿಯಾಶೀಲಗೊಳಿಸುವುದು ಹೊಂಗಿರಣದ ಉದ್ದೇಶ. ಈಗ ಕಾರ್ಯರೂಪಕ್ಕೆ ಬರುತ್ತಿದೆ. ಹೊಂಗಿರಣ ತಂಡವು ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದ ಯುವಕ-ಯುವತಿಯರಿಗಾಗಿ ಒಂದು ತಿಂಗಳ ರಂಗತರಬೇತಿ ಶಿಬಿರವನ್ನು ಬೆಳಲಕಟ್ಟೆಯಲ್ಲೇ ಹಮ್ಮಿಕೊಂಡಿದೆ. ಶಿಬಿರದ ನಿರ್ವಹಣೆಯನ್ನು ಹೊಂಗಿರಣ ತಂಡದ ಕಲಾವಿದರುಗಳಾದ ಚಂದ್ರಶೇಖರ ಹಿರೇಗೋಣಿಗೆರೆ ಹಾಗು ಚಂದ್ರಶೇಖರ ಶಾಸ್ತ್ರಿ ವಹಿಸಲಿದ್ದಾರೆ. ಶಿಬಿರದ ಕಡೆಯಲ್ಲಿ ಮಹಾಂತೇಶ ರಾಮದುರ್ಗ ರಚಿಸಿರುವ `ಸೋರುತಿಹುದು ಸಂಬಂಧ’ ಎಂಬ ನಾಟಕ ಪ್ರದರ್ಶನವನ್ನು ಬೆಳಲಕಟ್ಟೆ ಗ್ರಾಮದಲ್ಲಿ ಮಾಡುವ ಯೋಜನೆ ಇಟ್ಟುಕೊಂಡಿದ್ದೇವೆ. ಹಾಗು ಅದರ ಮರು ಪ್ರದರ್ಶನವನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮಾಡಲಿದ್ದೇವೆ. ರಂಗಭೂಮಿಯ ಕ್ರಿಯಾಶೀಲ ನಟ, ಹಲವು ಧಾರವಾಹಿಗಳಲ್ಲಿ ನಟಿಸಿರುವ ಬೆಳಲಕಟ್ಟೆಯವರೇ ಆದ ಚಂದ್ರಶೇಖರ ಶಾಸ್ತ್ರಿ ಈ ನಾಟಕವನ್ನು ನಿರ್ದೇಶನ ಮಾಡಲಿದ್ದಾರೆ ಎಂದರು.ಸ್ವಾತಂತ್ಯದ ಅಮೃತ ಮಹೋತ್ಸವದ ಅಂಗವಾಗಿ ಖ್ಯಾತ ಲೇಖಕಿ ಡಾ. ಹೆಚ್.ಎಸ್. ಅನುಪಮ ಅವರು ಕಸ್ತೂರ ಬಾ ಅವರ ಜೀವನ ಕಥನ ಆಧರಿಸಿ ಬರೆದಿರುವ ನಾನು ಕಸೂರ್ ಕೃತಿಯನ್ನು ಆಧರಿಸಿ ಏಕವ್ಯಕ್ತಿ ನಾಟಕವನ್ನು ಆರಂಭಿಸುತ್ತಿದ್ದೇವೆ.

ಪ್ರತಿಭಾನ್ವಿತ ನಟಿ ಸುಪ್ರಿಯಾ ರಾವ್ ಕಸ್ತೂರ್ ಬಾ ಪಾತ್ರ ನಿರ್ವಹಿಸಲಿದ್ದಾರೆ. ಸಾಸ್ವೆಹಳ್ಳಿ ಸತೀಶ್ ರವರು ರಂಗಪಠ್ಯ ಮಾಡಿ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ಕಟ್ಟೆ, ಮಾನಸ ಸಂತೋಷ್ ನಾಟಕದ ತಾಂತ್ರಿಕ ಕೆಲಸ ಮಾಡಲಿದ್ದಾರೆ ಎಂದರು.ಈ ನಮ್ಮ ಯೋಜನೆಗಳು ಬಹಳಷ್ಟು ಹಣವನ್ನು ಬಯಸುತ್ತವೆ. ಹಾಗಾಗಿ ನಮಗೆ ಪ್ರಾಯೋಜಕರ ನೆರವು ಅಗತ್ಯವಾಗಿದೆ. ಕಲಾ ಪೋಷಕರು ರಂಗಭೂಮಿಯ ಬಗ್ಗೆ ಒಲವು ಇರುವವರು ನಮ್ಮ ಜೊತೆ ಪ್ರಾಯೋಜಕರಾಗಿ ಕೈ ಜೋಡಿಸಬಹುದು. ನಮ್ಮ ಪಾಲುದಾರರಾಗಬಹುದು. ಅಂತಹ ಕಲಾ ಪೋಷಕರು ಮೇಲೆ ಸೂಚಿಸಿರುವ ನಂಬರ್ಗಳಿಗೆ ತಿಳಿಸಿದರೆ ನಾವೇ ನಿಮ್ಮ ಬಳಿ ಬರುತ್ತೇವೆ ಎಂದರು.ಇತ್ತೀಚೆಗೆ ನಾವು ಪ್ರದರ್ಶಿಸಿದ ಏಸೂರು ಕೊಟ್ಟರೂ ಈಸೂರು ಕೊಡೆವು ನಾಟಕ ಮೈಸೂರು ರಂಗಾಯಣದವರು ನಡೆಸುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಆಯ್ಕೆಯಾಗಿದ್ದು ಡಿ. 16 ರಂದು ಮೈಸೂರು ರಂಗಾಯಣದ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹರಿಗೆ ಗೋಪಾಲಸ್ವಾಮಿ, ಮಾನಸ ಸಂತೋಷ್, ಚಂದ್ರಶೇಖರ ಶಾಸ್ತ್ರೀ, ಹಾಲಸ್ವಾಮಿ, ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…