ಶಿವಮೊಗ್ಗ: ಕಾಲೇಜು ವಸತಿ ನಿಲಯಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿ ಎನ್.ಎಸ್.ಯು.ಐ. ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಶಾಲಾ-ಕಾಲೇಜುಗಳು ಆರಂಭವಾಗಿ ತಿಂಗಳು ಕಳೆದರೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವಸತಿ ನಿಲಯಗಳನ್ನು ಆರಂಭಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಕಳೆದ ಎರಡು ವರ್ಷಗಳಿಂದ ಕೊರೋನಾ ವೈರಸ್ ನಿಂದಾಗಿ ಯಾವುದೇ ಶಾಲಾ-ಕಾಲೇಜುಗಳು ಸರಿಯಾಗಿ ನಡೆದಿಲ್ಲ. ಈ ಬಾರಿ ತಡವಾಗಿ 2021 ರ ನವೆಂಬರ್ 8 ನಂತರ ಪೂರ್ಣಾವಧಿಯ ಶಾಲಾ-ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದು ತಿಂಗಳಾಗುತ್ತ ಬಂದಿದ್ದರೂ ಸರ್ಕಾರ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ ಆರಂಭಿಸಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕೆಂದು ಬರುತ್ತಿರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಕಳೆದೆರಡು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಕೆ ಅವಧಿ ಮುಗಿದಿದ್ದರೂ ಇದುವರೆಗೆ ಯಾವುದೇ ಇಲಾಖೆಗಳಲ್ಲಿ ವಸತಿನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಮಾಡಿ ಪ್ರಕಟಿಸಿಲ್ಲ. ಇದರಿಂದಾಗಿ ಶಿಕ್ಷಣಕ್ಕಾಗಿ ಆಗಮಿಸುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಪಿಜಿಗಳಲ್ಲಿ ಉಳಿಯಬೇಕಾಗಿದೆ. ಇಲ್ಲವೇ ಶಾಲಾ, ಕಾಲೇಜುಗಳಿಗೆ ಆಗಮಿಸದೇ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಕೂಡಲೇ ಎಲ್ಲಾ ಇಲಾಖೆಗಳಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆಪಟ್ಟಿ ಪ್ರಕಟಿಸಿ ವಿದ್ಯಾರ್ಥಿನಿಲಯಗಳನ್ನು ಆರಂಭಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಬಾಲಾಜಿ, ಪ್ರಮುಖರಾದ ಮಧುಸೂದನ್ ಕೆ. ಚೇತನ್, ರವಿಕುಮಾರ್, ಎಸ್.ಎನ್. ವಿಜಯಕುಮಾರ್, ಕಿರಣ್, ರವಿ, ಸಂಜಯ್, ಮನು, ಭರತ್, ಚಂದ್ರೋಜಿ ರಾವ್ ಇನ್ನಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…