ವಾಲ್ಮೀಕಿ ನಾಯಕ ಜನಾಂಗಕ್ಕೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಲ್ಲಿ ಸರ್ಕಾರಗಳು ಮೀನಾಮೇಷ ಎಣಿಸುತ್ತಿದ್ದು, ಇದನ್ನು ಪಡೆಯಲು ವಾಲ್ಮೀಕಿ ಸಮಾಜ ಸಂಘಟನೆಯಾಗಬೇಕಾದ ಅವಶ್ಯಕತೆ ತುರ್ತಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಅವರು ಇಂದು ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಫೆ. 8 ಮತ್ತು 9 ರಂದು ರಾಜನಹಳ್ಳಿ ಗುರುಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಹಿನ್ನಲೆಯಲ್ಲಿ ಇಲ್ಲಿನ ತಾಲೂಕು ವಾಲ್ಮೀಕಿ ಸಮಾಜ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.ವಾಲ್ಮೀಕಿ ಸಮಾಜ ಹಲವು ವರ್ಷಗಳಿಂದ ಮೀಸಲಾತಿಗಾಗಿ ತನ್ನ ಹೋರಾಟವನ್ನು ಮಾಡುತ್ತಲೇ ಬಂದಿದೆ. ಮುಖ್ಯವಾಗಿ ಮಕ್ಕಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಬೇಕೆ ಬೇಕಾಗಿದೆ. ಈಗ ಇರುವ ಶೇಕಡ 3 ರಷ್ಟು ಮೀಸಲಾತಿಯನ್ನು ಶೇಕಡ 7.5 ಕ್ಕೆ ಏರಿಸಬೇಕು ಎಂದು ನಾವು ಆಗ್ರಹಿಸುತ್ತಲೇ ಬಂದಿದ್ದೇವೆ ಎಂದರು.

ಆದರೆ, ಎಲ್ಲಾ ಪಕ್ಷಗಳು, ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಕಿವಿ ಮೇಲೆ ಹೂವು ಇಡುತ್ತವೆ ಅಷ್ಟೇ. ರಾಜ್ಯ ಸರ್ಕಾರ ಆಯೋಗ ರಚನೆ ಮಾಡಿದೆ. ಸುಪ್ರೀಂ ಕೋರ್ಟ್ ಹೇಳಿದ್ದರೂ ಕೂಡ ಆಯೋಗ ರಚನೆ ಮಾಡುವ ಅವಶ್ಯಕತೆ ಇರಲಿಲ್ಲ. ಮೂಗಿಗೆ ತುಪ್ಪ ಹಚ್ಚಬೇಕೆಂದೆ ಸರ್ಕಾರಗಳು ಈ ರೀತಿ ದಾರಿ ತಪ್ಪಿಸುತ್ತಿವೆ. ಇದರ ವಿರುದ್ಧ ನಾವು ಹೋರಾಡುವುದು, ಸಂಘಟನೆಯಾಗುವುದು, ಜಾಗೃತಿಯಾಗುವುದು ಅನಿವಾರ್ಯವಾಗಿದೆ ಎಂದರು.ಇದನ್ನೇ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಫೆ. 8 ಮತ್ತು 9 ರಂದು ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದೊಂದು ವೈಚಾರಿಕ ಜಾತ್ರೆಯಾಗಿದೆ. ನಮ್ಮ ಹಕ್ಕನ್ನು ಪಡೆಯಲು ನಾವೆಲ್ಲ ಸಂಘಟನೆಯಾಗಬೇಕೆಂದು ಈ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದ ಜಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜಕೀಯ ಮೀಸಲಾತಿ ಸೇರಿದಂತೆ ಎಲ್ಲಾ ರೀತಿಯ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವ ಮೀಸಲಾತಿಯೂ ನಮಗೆ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮಾಜದವರು ಪರಸ್ಪರ ಕಾಲೆಳೆಯುವುದನ್ನು ಬಿಡಬೇಕು. ಅಧಿಕಾರಕ್ಕಾಗಿ ಹಂಬಲ ಬೇಡ, ತಾಳ್ಮೆ ಇರಲಿ. ನಮ್ಮ ಉದ್ದೇಶ ನಮ್ಮ ಮಕ್ಕಳಿಗೆ ಮೀಸಲಾತಿ ಸಿಗಬೇಕೆಂಬುದಾಗಿದೆ. ಮತ್ತು ಶಾಂತಿ ಬಯಸುವುದು, ಸಂಘಟನೆಯಾಗುವುದು, ಅಸ್ಪೃಶ್ಯತೆಯಿಂದ ಪಾರಾಗುವುದಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ನಮಗೆ ಮೀಸಲಾತಿ ಸಿಕ್ಕರೆ ಸಾಕು. ಸ್ವಾರ್ಥಗಳನ್ನು ದೂರ ಮಾಡೋಣ. ನಮ್ಮ ಕಿವಿ ಮೇಲೆ ಹೂ ಇಡುವ ರಾಜಕಾರಣಿಗಳ ಬಗ್ಗೆ ಎಚ್ಚರ ವಹಿಸೋಣ. ಚುನಾವಣೆಗಳಲ್ಲಿ ಅವರಿಗೆ ಬುದ್ಧಿ ಕಲಿಸೋಣ ಎಂದು ಕರೆ ನೀಡಿದರು.ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಹೆಚ್.ಆರ್. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಮೀಜಿಗಳು ವಾಲ್ಮೀಕಿ ಜಾತ್ರೆ ಸಂಬಂಧಿಸಿದಂತೆ ಸಂಘಟನೆ ಮಾಡುವ ಜವಾಬ್ದಾರಿಯನ್ನು ತಮಗೆ ನೀಡಿದ್ದು, ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಸಮಾಜದ ಎಲ್ಲಾ ಮುಖಂಡರ ಜೊತೆ ಸೇರಿಕೊಂಡು ಸ್ವಾಮೀಜಿಗಳ ಆಶಯಕ್ಕೆ ಯಾವ ಚ್ಯುತಿಯೂ ಬರದಂತೆ ಕೆಲಸ ಮಾಡುತ್ತೇವೆ. ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ವಾಲ್ಮೀಕಿ ಸಮಾಜ ಮುಖ್ಯ ವಾಹಿನಿಗೆ ಬರುವ ಕನಸು ಕಂಡಿರುವ ಸ್ವಾಮೀಜಿಗಳ ಜೊತೆ ನಾವೆಲ್ಲಾ ಸೇರಿಕೊಂಡು ಕೆಲಸ ಮಾಡುತ್ತೇವೆ ಎಂದರು.

ಈ ಸಭೆಯಲ್ಲಿ ಸಮಾಜದ ಮುಖಂಡರಾದ ಲಕ್ಷ್ಮಿ ನಾರಾಯಣ, ಬೀರನಕೆರೆ ರುದ್ರಪ್ಪ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ರವಿಕುಮಾರ್, ಪರಶುರಾಮ್, ಮಂಜಣ್ಣ, ಲೋಕಣ್ಣ, ರುದ್ರಪ್ಪ, ತಾರಾ, ಅನುಸೂಯ ಸೇರಿದಂತೆ ಹಲವು ಮುಖಂಡರನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…