ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರವಿಲ್ಲದೇ ಶಾಲೆಗೆ ಬರಬೇಡಿ ಎಂದು ಶಿಕ್ಷಕರು ತಾಕೀತು ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್(ಐ.ಎನ್.ಟಿ.ಯು.ಸಿ) ವತಿಯಿಂದ ಇಂದು ಡಿಡಿಪಿಐ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಶಾಲೆಗಳು ಈಗಾಗಲೇ ಆರಂಭವಾಗಿದ್ದು, ಹಲವು ಶಾಲೆಗಳಲ್ಲಿ ಇದುವರೆಗೂ ಸಮವಸ್ತ್ರಗಳನ್ನು ನೀಡಿಲ್ಲ. ಆದರೆ, ಕೆಲವು ಶಾಲೆಗಳ ಶಿಕ್ಷಕರು, ಮುಖ್ಯೋಪಾಧ್ಯಾಯರು ಮಾತ್ರ ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಸಮವಸ್ತ್ರವಿಲ್ಲದೇ ಶಾಲೆಗೆ ಬರಬೇಡಿ ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ. ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ತೆಗೆದುಕೊಂಡು ಹೊಲೆಸಿಕೊಂಡು ಶಾಲೆಗೆ ಬನ್ನಿ ಇಲ್ಲದಿದ್ದರೆ ಶಾಲೆಗೆ ಕಳಿಸಬೇಡಿ ಎಂದು ಪೋಷಕರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಧರಿಸದ ಮಕ್ಕಳನ್ನು ಶಾಲೆಯ ಆವರಣದಲ್ಲೇ ನಿಲ್ಲಿಸಿ ವಾಪಸ್ ಕಳಿಸುತ್ತಿದ್ದಾರೆ. ಟಿಸಿ ಕೊಡುವ ಬೆದರಿಕೆ ಹಾಕುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಓದಿಸಿ ಎಂದು ಪೋಷಕರಿಗೆ ಸಲಹೆ ಬೇರೆ ಕೊಡುತ್ತಾರೆ.
ಇದು ಸರ್ಕಾರ ತಪ್ಪಾಗಿದ್ದು, ಉಚಿತವಾಗಿ ಬಟ್ಟೆ ನೀಡಬೇಕು. ಆದರೆ, ಹಣವಿಲ್ಲ, ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ಅವರು ದೂರಿದ್ದಾರೆ.ಇದರ ಜೊತೆಗೆ ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕ ಸಿಕ್ಕಿಲ್ಲ. ಪಾಠಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಅನೇಕ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ, ಕುಡಿಯುವ ನೀರು ಇಲ್ಲ. ಕೋವಿಡ್ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಸರ್ಕಾರಿ ಶಾಳೆಗಳತ್ತ ಗಮನಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಕವಿತಾ ರಾಘವೇಂದ್ರ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಅರ್ಜುನ್, ವಿಶಾಲ್, ನಿಸಾರ್ ಅಹಮ್ಮದ್, ಮೊಹಮ್ಮದ್ ಆರೀಫ್ ವುಲ್ಲಾ, ಮೊಹಮ್ಮದ್ ನಿಹಾಲ್ ಸೇರಿದಂತೆ ಹಲವರಿದ್ದರು.