ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತದಿಂದ ಇಂದು ನಗರದ ಮಂಡ್ಲಿಯಲ್ಲಿರುವ ಕೆಳದಿ ವಂಶಸ್ಥರಾದ ಸೋಮಶೇಖರ ನಾಯಕ ಮತ್ತು ಅವರ ಮಡದಿಯ ಸಮಾಧಿ ಸ್ಥಳ ಸಂರಕ್ಷಿಸುವ ದೃಷ್ಟಿಯಿಂದ ಸುತ್ತಲೂ ಬೆಳೆದ ಗಿಡ ಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯವನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು.

ಇತ್ತೀಚೆಗೆ ಆ ಸ್ಥಳದಲ್ಲಿ ಸ್ವಚ್ಚತೆಗೆ ಹೋದಾಗ ಮುಸ್ಲಿಂ ಸಮಾಜದವರು ಅದು ಖಬರಸ್ಥಾನ್ ಜಾಗವಾಗಿದ್ದು, ನ್ಯಾಯಾಲಯದ ಆದೇಶ ಬರುವವರೆಗೆ ಸ್ವಚ್ಛತೆ ಮಾಡದಂತೆ ಆಗ್ರಹಿಸಿದ್ದು, ತಡೆಯೊಡ್ಡಿದ್ದರು. ಬಳಿಕ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮತ್ತು ಮಂಡಲೇಶ್ವರ ಸ್ವಾಮಿ ಕಮಿಟಿ ವತಿಯಿಂದ ಕೆಳದಿ ಅರಸರ ಸಮಾಧಿ ಸ್ಥಳವನ್ನು ಪ್ರಾಚ್ಯ ವಸ್ತು ಇಲಾಖೆಗೆ ಖಾತೆ ಮಾಡಿಕೊಟ್ಟು ಸಂರಕ್ಷಿಸಬೇಕು ಎಂದು ಒತ್ತಾಯಿಸಿದ್ದರು. ಪುರಾತತ್ವ ಇಲಾಖೆಯ ಸಂಶೋಧಕರಾದ ಪ್ರೊ. ಅ. ಸುಂದರ್ ಮತ್ತಿತರರು, ಅದು ಅರಸರ ಸಮಾಧಿಗೆ ಮೀಸಲಿಟ್ಟ ಜಾಗ ಮತ್ತು ಅಲ್ಲಿರುವ ಎರಡು ಸಮಾಧಿಗಳು ಕೆಳದಿ ಮನೆತನದವರದ್ದಾಗಿದ್ದು, ಆ ಸಮಾಧಿಯ ಮೇಲೆ ಇರುವ ಪ್ರಾಣಿಗಳ ಚಿತ್ರ, ಕಮಲದ ಚಿತ್ರ ಮತ್ತು ದೀಪ ಇಡುವ ಜಾಗವನ್ನು ಹಾಗೂ ಇನ್ನಿತರ ಕುರುಹುಗಳನ್ನು ಉಲ್ಲೇಖಿಸಿ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದರು.

ಈ ನಡುವೆ ಮುಸ್ಲಿಂ ಮುಖಂಡರು ಮತ್ತು ಮಂಡಲೇಶ್ವರ ಕಮಿಟಿ ನಡುವೆ ಆ ಜಾಗದ ಹಕ್ಕಿಗಾಗಿ ವ್ಯಾಜ್ಯ ಏರ್ಪಟಿತ್ತು. ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇತ್ತೀಚೆಗೆ ಆ ಸ್ಥಳವನ್ನು(ಸುಮಾರು 1 ಎಕರೆ 19 ಗುಂಟೆ) ಪುರಾತತ್ವ ಇಲಾಖೆಗೆ ಹಸ್ತಾಂತರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿತ್ತು. ಅದಾದ ನಂತರ ಆ ಜಾಗದ ಸ್ವಚ್ಛತಾ ಕಾರ್ಯಕ್ಕೆ ಹೋದಾಗ ಮತ್ತೆ ವಿವಾದ ಭುಗಿಲೆದ್ದಿತು. ಇಂದು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆ ಜಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಫೆನ್ಸಿಂಗ್ ಬೇಲಿ ಹಾಕಲಾಗಿದೆ.ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಆ ಸಮಾಧಿಯ ಕೆಳ ಭಾಗದ ಕಲ್ಲಿನಲ್ಲಿ ಅರೇಬಿಕ್ ಭಾಷೆಯ ಲಿಪಿ ಇದೆ ಎಂದು ವಾದಿಸಿದ್ದಾರೆ. ಈ ಜಾಗ ಪುರಾತತ್ವ ಇಲಾಖೆಗೆ ಸಂರಕ್ಷಣೆಯ ಜವಾಬ್ದಾರಿ ಜಿಲ್ಲಾಡಳಿತ ವಹಿಸಿದ್ದು, ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್ ಸೇರಿದಂತೆ ಪಾಲಿಕೆ, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…