ಶಿವಮೊಗ್ಗ: ನಿವೃತ್ತ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಒಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಿ. ನಮ್ಮ ಸಹಕಾರ ಸದಾ ನಿಮಗೆ ಇದೆ ಎಂದು ರಾಜ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಇಂದು ನಿವೃತ್ತ ಪೊಲೀಸ್ ಅಧಿಕಾರಿ ಪಿ.ಒ. ಶಿವಕುಮಾರ್ ಅವರ ಮನೆ ಆವರಣದಲ್ಲಿ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರಮುಖರ ಜೊತೆ ಮಾತನಾಡಿ, ನಿಮ್ಮ ಅನುಭವ ನಮಗೆಲ್ಲ ಅತಿ ಮುಖ್ಯ. ನೀವೆಲ್ಲ ನಮ್ಮ ಜೊತೆಗಿರಬೇಕು. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧ. ವಿದ್ಯೆಗಿಂತ ಅನುಭವವೇ ಮೇಲು. ನಿಮ್ಮೆಲ್ಲರ ಅನುಭವ ಪಕ್ಷಕ್ಕೆ ಅಗತ್ಯವಿದೆ ಎಂದರು. ಮುಂದಿನ ದಿನಗಳಲ್ಲಿ ಸದೃಢ ಸರ್ಕಾರ ರಚನೆಗೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಬೆಂಬಲಿಸಬೇಕು. ಚೌ ಚೌ ಸರ್ಕಾರಕ್ಕೆ ಅವಕಾಶ ನೀಡಬೇಡಿ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ರಾಜಕೀಯ ಅಸ್ಥಿರತೆ ಬರದ ಹಾಗೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಅಸ್ಥಿರ ಸರ್ಕಾರದಿಂದ ಅಭಿವೃದ್ದಿ ಕುಂಠಿತವಾಗುತ್ತದೆ.
ನೀವೆಲ್ಲಾ ಸೇರಿ ಒಂದು ದೊಡ್ಡ ಸಮಾವೇಶ ಮಾಡಿ. ನಾವು ಭಾಗವಹಿಸುವುದರ ಜೊತೆಗೆ ನಮ್ಮಿಂದಾಗುವ ಸಹಕಾರ ನೀಡಲು ಸಿದ್ಧ ಎಂದರು.ಸಂಘದ ಪ್ರಮುಖರು ಮಾತನಾಡಿ, ಅಭಿವೃದ್ದಿ ದೃಷ್ಟಿಯಿಂದ ನಾವು ಕೂಡ ಮುಂದಿನ ದಿನಗಳಲ್ಲಿ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಪಿ.ಒ. ಶಿವಕುಮಾರ್, ರವಿಕುಮಾರ್, ಮಂಜುನಾಥ್, ಜಯಣ್ಣ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಆರ್.ಎಂ. ಮಂಜುನಾಥ ಗೌಡ, ಡಾ. ಶ್ರೀನಿವಾಸ್ ಕರಿಯಣ್ಣ, ರವಿಕುಮಾರ್ ಮೊದಲಾದವರಿದ್ದರು.