ಬ್ಯಾಂಕ್ ಅವ್ಯವಹಾರಕ್ಕೆ ನೆರವಾದವರಿಗೆ ಅವಕಾಶ ನೀಡಬೇಡಿ: ನ್ಯಾ ಶ್ರೀ ಕುಮಾರ್..

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್‌) ತನ್ನ ಮೂಲ ಉದ್ದೇಶವನ್ನೇ ಮರೆತು ಕಾರ್ಯನಿವರ್ಹಿಸುತ್ತಿದ್ದು, ಬ್ಯಾಂಕ್‌ಗಳಿಗೆ ವಂಚಿಸಿದವರಿಗೆ ನೆರವಾದವರೂ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇಂತಹವರಿಗೆ ಈ ಬಾರಿಯಾದರೂ ಅವಕಾಶ ನೀಡದೆ ಬದಲಾವಣೆ ತರಬೇತು ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಹೇಳಿದರು.

ಎನ್ ಆರ್ ಕಾಲೋನಿ ಶ್ರೀ ರಾಮಮಂದಿರದ “ಪತ್ತಿ ಸಭಾಂಗಣ” ದಲ್ಲಿ ಮುಲಕ‌ನಾಡು ಸಂಘ ಆಯೋಜಿಸಿದ ಎಕೆಬಿಎಂಎಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲಾಭದಲ್ಲಿದ್ದ ಸಹಕಾರ ಬ್ಯಾಂಕ್‌ಗಳನ್ನು ಮುಳುಗಿಸಿದವರಿಗೆ ನೆರವಾದವರು, ಕೋವಿಡ್‌ ಸಮಯದಲ್ಲೂ ಬ್ರಾಹ್ಮಣ ಸಮುದಾಯದ ನೆರವಿಗೆ ಬಾರದೆ ಹೋದವರು ಮಹಾಸಭಾದಲ್ಲಿ ಇನ್ನೂ ಇರಬೇಕೇ ಎಂಬುದನ್ನು ಪ್ರಬುದ್ಧ, ಪ್ರಜ್ಞಾವಂತ ತ್ರಿಮತಸ್ಥ ಬ್ರಾಹ್ಮಣ ಮತದಾರರು ಚಿಂತಿಸಬೇಕು ಎಂದರು.

ಬ್ರಾಹ್ಮಣರ ಅಭಿವೃದ್ಧಿ ಕಾರ್ಯಕ್ರಮಗಳೇ ಮಹಾಸಭಾದಲ್ಲಿ ಇಲ್ಲ. ಬೈಲಾದಲ್ಲಿನ ಲೋಪಗಳನ್ನೇ ಬಳಸಿಕೊಂಡು ಇದುವರೆಗೆ ಅಧಿಕಾರ ಚಲಾಯಿಸಿದ ಮಂದಿ ಮಹಾಸಭಾದ ಬೆಳವಣಿಗೆಯನ್ನೇ ತಡೆಗಟ್ಟಿದ್ದಾರೆ. ಬೈಲಾವನ್ನು ಬದಲಿಸಲು ಮುಂದಾಗದ ಇವರು ಬೆಂಗಳೂರಿನ ಬಸವನಗುಡಿಗೇ ಸೀಮಿತವಾಗಿಟ್ಟುಕೊಂಡು ಮಹಾಸಭಾವನ್ನು ಸಂಕುಚಿತಗೊಳಿಸಿಕೊಂಡಿದ್ದಾರೆ. ಹೇಗಿದ್ದರೂ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಇದೆಲ್ಲ ನಡೆದಿದ್ದು, ಇನ್ನು ಮುಂದೆ ಇದಕ್ಕೆ ಅವಕಾಶ ನೀಡಬಾರದು ಎಂದು ಕುಮಾರ್ ಕೇಳಿಕೊಂಡರು.

ಮಹಾಸಭಾ ಸ್ಥಾಪನೆಗೊಂಡು ಆರ್ಧ ಶತಮಾನವಾಗುತ್ತ ಬಂದಿದೆ. ಸುಮಾರು 40 ಲಕ್ಷದಷ್ಟು ಜನರನ್ನು ಸಮರ್ಥವಾಗಿ ಪ್ರತಿನಿಧಿಸಬೇಕಿದ್ದ ಸಂಘಟನೆ ನಾಯಕತ್ವ ಕೊರತೆಯಿಂದ ಬಳಲುತ್ತಿದೆ. ಸಮುದಾಯಕ್ಕೆ ನೆರವಾಗುವಂತಹ ಯಾವ ಯೋಜನೆಯೂ ಮಹಾಸಭಾದಲ್ಲಿ ಇಲ್ಲ. ಹೀಗಾಗಿ ಈ ಬಾರಿ ಮಹಾಸಭಾದ ನಾಯಕತ್ವ ಬದಲಾವಣೆ ಅಗತ್ಯವಾಗಿದೆ ಎಂದರು.

ಎಕೆಬಿಎಂಎಸ್‌ ಅಧ್ಯಕ್ಷ ಆಕಾಂಕ್ಷಿತ ಅಭ್ಯರ್ಥಿ ಎಸ್‌.ರಘುನಾಥ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ, ಸಾಮೂಹಿಕ ಆರೋಗ್ಯ ವಿಮೆ, ಶಾಲೆ, ಕಾಲೇಜುಗಳ ಸ್ಥಾಪನೆ ಸಹಿತ ವಿವಿಧ ಕಾರ್ಯಗಳಿಗಾಗಿ 100 ಕೋಟಿ ರೂಪಾಯಿಗಳ ಕಾಪು ನಿಧಿ ಸ್ಥಾಪಿಸುವ ಚಿಂತನೆ ನಡೆಸಿರುವುದನ್ನು ತಿಳಿಸಿದರು.
ಬೈಲಾದಲ್ಲಿನ ಲೋಪಗಳನ್ನು ಸರಿಪಡಿಸುವುದು ತಮ್ಮ ಮೊದಲ ಆದ್ಯತೆ ಎಂದ ಅವರು, ಅಧ್ಯಕ್ಷರಾಗಿ ಆಯ್ಕೆಯಾದರೆ ಸದಸ್ಯತ್ವವನ್ನು ಈಗಿನ 40 ಸಾವಿರದಿಂದ 5 ಲಕ್ಷಕ್ಕೆ ಹೆಚ್ಚಿಸುವುದು ನಿಶ್ಚಿತ ಮತ್ತು ಸಮುದಾಯಕ್ಕೆ ಹತ್ತಿರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಮುಲಕನಾಡು ಸಂಘದ ಅಧ್ಯಕ್ಷ ಶ್ರೀ ಎಸ್ ಆರ್ ಕೃಷ್ಣಮೂರ್ತಿ ಮಾತನಾಡಿ, ಬರೀ ನಾಮಕಾವಸ್ಥೆಗೆ ಇರುವ ಎಕೆಬಿಮ್ಎಸ್ ಸಮುದಾಯಕ್ಕೆ ಅಗತ್ಯತೆಗೆ – ನೆರವಿಗೆ ಬರಬೇಕಿದ್ದ ಮಹಾಸಭಾ ತನಗೆ ಸಂಬಂಧವೇ ಇಲ್ಲದಂತೆ ವರ್ತಿಸಿತು. ಈ ಅವ್ಯವಸ್ಥೆಯನ್ನು ಹೀಗೆಯೇ ಮುಂದುವರಿಯಲು ಬಿಡಬಾರದು ಮುಲಕನಾಡು ಸಂಘವು ನಮ್ಮ ಅಭ್ಯರ್ಥಿ ಶ್ರೀ ಎಸ್ ರಘುನಾಥ್ ರವರ ‌ಗೆಲುವಿಗೆ ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಆರ್ ನಾರಾಯಣ್, ಶ್ರೀ ನಂದಕುಮಾರ್, ಶ್ರೀ ಎಸ್ ದತ್ತಾತ್ರಿ, ಶ್ರೀ ವೈ ಎನ್ ಶರ್ಮಾ, ದಿಲೀಪ್ ಸತ್ಯ, ರಾಮಕೃಷ್ಣ ಶ್ರೋತ್ರಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತಿಯಿದ್ದು ಬೆಂಬಲ ಸೂಚಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…