ಶಿವಮೊಗ್ಗ: ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಂದು ವಿದ್ಯಾರ್ಥಿ ಸಂಘಟನೆ ವತಿಯಿಂದ ನೆಹರೂ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದದರಲ್ಲದೇ. ಜಯನಗರ ಪೊಲೀಸ್ ಠಾಣೆಗೆ ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಿದರು.

ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರ ಬಗ್ಗೆ ಅವಮಾನಕಾರ ಹೇಳಿಕೆ ನೀಡಿರುವುದು ಸರಿಯಲ್ಲ. ಪೊಲೀಸರನ್ನು ನಾಯಿ ಎಂದು ಕರೆದರೆ ಅವರ ಕುಟುಂಬದವರು ಹೇಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಆರಗ ಜ್ಞಾನೇಂದ್ರ ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರು ಒಂದು ಗಂಟೆ ಖಾಕಿ ಕಳಚಿ ಮನೆ ಸೇರಿಕೊಂಡರೆ ನಿಮ್ಮ ಸಚಿವ ಸ್ಥಾನವೂ ಇರುವುದಿಲ್ಲ. ಸರ್ಕಾರವೂ ಇರುವುದಿಲ್ಲ. ಒಳ್ಳೆಯವರು, ಕೆಟ್ಟವರು ಎಲ್ಲಾ ಇಲಾಖೆಯಲ್ಲೂ ಇದ್ದಾರೆ. ಇನ್ನು ಮೇಲೆ ನೀವು ಯಾವುದೇ ಕಾರ್ಯಕ್ರಮಕ್ಕೆ ಪೊಲೀಸರನ್ನು ಬಳಸಿಕೊಳ್ಳಬೇಡಿ. ನಿಮ್ಮ ಹೇಳಿಕೆಯಿಂದ ಪೊಲೀಸರು ಮತ್ತು ಅವರ ಕುಟುಂಬ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದರು.ಪ್ರತಿಭಟನೆಗೆ ಕರುನಾಡ ಯುವ ಶಕ್ತಿ ಸಂಘಟನೆ ಬೆಂಬಲ ನೀಡಿತ್ತು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜವತ್, ಜಫ್ರುಲ್ಲಾ, ಕೆವೈಎಸ್ ನ ವಸಂತ್ ಕುಮಾರ್, ಚಿದಾನಂದ್ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…