ದಿನಾಂಕ 17-04-2017 ರಂದು ಆರೋಪಿಯಾದ ಅನಿಲ್ @ ಅನಿಲ್ ಡಿಸೋಜಾ, 26 ವರ್ಷ, ರಾಮನಗರ, ಸಾಗರ ಟೌನ್ ಈತನು ಸಾಗರ ಟೌನ್ ವಾಸಿಯಾದ ಮಹಿಳೆಯೊಬ್ಬರನ್ನು ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್ ನಲ್ಲಿ ರಾತ್ರಿ ಕರ್ತವ್ಯಕ್ಕೆ ಕರೆದಿದ್ದಾರೆ ಬನ್ನಿ ಎಂದು ಹೇಳಿ ಆಕೆಯನ್ನು ಮನೆಯಿಂದ ಆಟೋದಲ್ಲಿ ಕೂರಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದು ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿರುತ್ತಾನೆ. ಆನಂತರ ಮಹಿಳೆಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಆಸ್ಪತ್ರೆಯಲ್ಲಿ ತೋರಿಸಿದಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿರುತ್ತದೆ ಎಂದು ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ದಿನಾಂಕ:15-10-2017 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0456/2017 ಕಲಂ 376(2)(ಎನ್) ಐ.ಪಿ.ಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣದ ತನಿಖೆಯನ್ನು ಮಂಜುನಾಥ್ ಇ.ಓ ಸಿಪಿಐ ಸಾಗರ ಗ್ರಾಮಾಂತರ ವೃತ್ತ ರವರು ಕೈಗೊಂಡು ದಿನಾಂಕಃ-01-02-2018 ರಂದು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಅಣ್ಣಪ್ಪ ನಾಯ್ಕ್ ಅವರು ವಾದ ಮಂಡಿಸಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಮಹಾಂತಪ್ಪ ರವರು ದಿನಾಂಕ 09-12-2021 ರಂದು ಆರೋಪಿತನ ವಿರುದ್ಧ ಕಲಂ 376(2)(ಎನ್) ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ಅನಿಲ್ @ ಅನಿಲ್ ಡಿಸೋಜಾನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000/- ರೂ ದಂಡ, ದಂಡವನ್ನು ಕಟ್ಟದಿದ್ದರೆ 02 ವರ್ಷಗಳ ಸಾದಾ ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ ನೊಂದ ಮಹಿಳೆಗೆ ಪರಿಹಾರವಾಗಿ 50,000/- ರೂ ಪಾವತಿ ಮಾಡಲು ಆದೇಶ ನೀಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…