ಶಿವಮೊಗ್ಗ: ಮತಾಂತರ ಕಾಯ್ದೆ ಜಾರಿಗೆ ತರಲಿಕ್ಕಾದರೂ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವಿಗೆ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅದ್ಯಾವ ಬುದ್ದಿ ಇದೆಯೋ ಗೊತ್ತಿಲ್ಲ. ಹಿಂದೂ ಧರ್ಮದ ಅವನತಿ ನಡೆಯುತ್ತಿದ್ದರೂ ಕೂಡ ಕೇವಲ ವೋಟಿನ ರಾಜಕಾರಣಕ್ಕಾಗಿಯೇ ಧರ್ಮ ವಿರೋಧ ಮಾಡುತ್ತಿದ್ದಾರೆ.

ಇಂತಹವರಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ಬಿಜೆಪಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿಯೇ ಮಾಡುತ್ತದೆ. ಆ ಮೂಲಕ ಹಿಂದೂ ಧರ್ಮವನ್ನು ರಕ್ಷಣೆ ಮಾಡುವ ಬಿಜೆಪಿಗೆ ವಿಧಾನ ಪರಿಷತ್ ನಲ್ಲೂ ಬಹುಮತ ಬೇಕಾಗಿದ್ದು, ಇದಕ್ಕಾಗಿಯಾದರೂ ಬಿಜೆಪಿ ಬೆಂಬಲಿಸಬೇಕೆಂದು ಅವರು ಕೋರಿದರು.ಮತಾಂತರ ನಿಷೇಧದ ಜೊತೆಗೆ ಇನ್ನಿತರ ಉತ್ತಮ ಕಾಯ್ದೆಗಳನ್ನು ಕೂಡ ಜಾರಿಗೆ ತರಬೇಕಾಗಿದೆ. ಇದಕ್ಕೆ ಪರಿಷತ್ ಸಹಕಾರ ಬೇಕೇ ಬೇಕು. ಈಗ 26 ಬಿಜೆಪಿ ಸದಸ್ಯರಿದ್ದು, ಇನ್ನೂ 12 ಸದಸ್ಯರ ಬೆಂಬಲವಿದ್ದರೆ ನಾವು ಪೂರ್ಣ ಬಹುಮತ ಪಡೆಯುತ್ತೇವೆ. ಹಾಗಾಗಿ ಈ ಚುನಾವಣೆಯಲ್ಲಿ ಕನಿಷ್ಠಪಕ್ಷ 15 ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆದ್ದರೆ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಎಲ್ಲಾ ಕಾಯ್ದೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಬಹುದು ಎಂದರು.

ಡಿ.ಕೆ. ಶಿವಕುಮಾರ್ ಅವರು ರಾಜಕಾರಣ ಬಿಟ್ಟು ಯೋಚಿಸಬೇಕಾಗಿದೆ. ಲವ್ ಜಿಹಾದ್ ಮೂಲಕ ನಮ್ಮ ಮಕ್ಕಳು ಅದೆಷ್ಟು ಮೋಸಕ್ಕೆ ಒಳಗಾಗಿದ್ದಾರೆ. ಅದೆಷ್ಟು ಸಂಕಟಪಟ್ಟಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲವೇ? ನಮ್ಮ ಹೆಣ್ಣು ಮಕ್ಕಳಿಗೆ ಇಲ್ಲದ ಆಸೆ ತೋರಿಸಿ, ನಂಬಿಸಿ ಮದುವೆಯಾಗಿ ನಂತರ ಕೈಬಿಡುತ್ತಾರೆ. ಅಂತಹ ಹೆಣ್ಣುಮಕ್ಕಳ ಗತಿಯೇನು? ಈಗಾಗಲೇ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಹಿಂದೂ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಒಮ್ಮೆ ಶಾಸಕ ಗೂಳಿಹಟ್ಟಿ ಶೇಖರ್ ಅವರೇ ಅವರ ತಾಯಿಯ ಬಲವಂತದ ಮತಾಂತರದ ಬಗ್ಗೆ ಹೇಳಿದ್ದರು.

ಆದ್ದರಿಂದ ಡಿಕೆಶಿಯವರು ತಮ್ಮ ವೋಟಿನ ರಾಜಕಾರಣ ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷ ಮತಾಂತರ ನಿಷೇಧ ಕಾಯ್ದೆಗೆ ಸಹಕರಿಸಬೇಕಿತ್ತು. ಆದರೆ, ಅವರು ವಿರೋಧ ವ್ಯಕ್ತಪಡಿಸಿವುದರಿಂದ ಪರಿಷತ್ ನಲ್ಲೂ ಈ ಕಾಯ್ದೆ ಅನುಮೋದನೆ ಪಡೆಯಲು ಬಹುಮತ ಬೇಕಾಗಿದೆ ಎಂದರು.ಬಾಕ್ಸ್ :ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಅವರು ದೇಶಭಕ್ತರ ಕುಟುಂಬದಿಂದ ಬಂದವರು. ಅವರ ತಂದೆ ಡಿ.ಹೆಚ್. ಶಂಕರಮೂರ್ತಿ ಮತ್ತು ಅವರ ಅಜ್ಜ ಕೂಡ ದೇಶಭಕ್ತರಾಗಿದ್ದರು. ಡಿ.ಹೆಚ್. ಶಂಕರಮೂರ್ತಿ ಸೇರಿದಂತೆ ಅವರ ಕುಟುಂಬದ ಅನೇಕರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿರುವಾಗಲೇ ಡಿ.ಹೆಚ್. ಶಂಕರಮೂರ್ತಿ ತಂದೆಯವರು ತೀರಿಕೊಂಡರೂ ಸಹ ಅವರನ್ನು ನೋಡಲು ಕೂಡ ಅಂದಿನ ಕಾಂಗ್ರೆಸ್ ಸರ್ಕಾರ ಬಿಡಲಿಲ್ಲ. ಇಂತಹ ದೇಶಭಕ್ತ ಕುಟುಂಬದಿಂದ ಬಂದಿರುವ ಅರುಣ್ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…