ಶಿವಮೊಗ್ಗ: ಪ್ರಾಣದ ಹಂಗು ತೊರೆದು ಸರಗಳ್ಳನನ್ನು ಬಂಧಿಸುವಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ವಿ.ಹೆಚ್. ಮುನೇಶಪ್ಪ ಯಶಸ್ವಿಯಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಸಮಯದಲ್ಲಿ ಉಷಾ ನರ್ಸಿಂಗ್ ಹೋಂ ಬಳಿ ತಾಯಿ ಮತ್ತು ಮಗಳು ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಕತ್ತಿನಲ್ಲಿದ್ದ ಸರಕ್ಕೆ ಕೈಹಾಕಿದ್ದಾರೆ. ಯುವತಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಆಗ, ಯುವತಿ ಸಾಹಸಪಟ್ಟು ಬೈಕ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಸುಮಾರು ಅರ್ಧ ಪರ್ಲಾಂಗ್ ದೂರದವರೆಗೆ ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.
ಆ ಸಂದರ್ಭದಲ್ಲಿ ಕರ್ತವ್ಯ ಮುಗಿಸಿ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಮುನೇಶಪ್ಪ ಸರಗಳ್ಳರ ಬೆನ್ನತ್ತಿದ್ದಾರೆ. ರೆಲ್ವೇ ಟ್ರ್ಯಾಕ್ ಪಕ್ಕದ ಚಾನಲ್ ರಸ್ತೆ ಮೂಲಕ ಶರಾವತಿ ನಗರದವರೆಗ ಸುಮಾರು ಎರಡು ಕಿಲೋ ಮೀಅರ್ ಗೂ ಅಧಿಕ ದೂರ ಸರಗಳ್ಳರನ್ನು ಬೆನ್ನಟ್ಟಿದಾಗ ಶರಾವತಿ ನಗರದಲ್ಲಿ ಕಳ್ಳರ ಬೈಕ್ ನ ಪೆಟ್ರೋಲ್ ಖಾಲಿಯಾಗಿದ್ದರಿಂದ ಬೈಕ್ ಅಲ್ಲೇ ಬಿಟ್ಟು ಓಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಹಿಡಿಯಲೆತ್ನಿಸಿದ ಮುನೇಶಪ್ಪನ ಮೇಲೆ ಚಾಕುವಿನಿಂದ ಹಲ್ಲೆಗೂ ಯತ್ನಿಸಿದ್ದಾರೆ.
ಆದರೂ ಚಾಕಚಕ್ಯತೆಯಿಂದ ಓರ್ವನನ್ನು ಹಿಡಿಯಲು ಯಶಸ್ವಿಯಾಗಿದ್ದು, ಆರೋಪಿ ಮೊಹಮ್ಮದ್ ಶಾರುಖ್ ನನ್ನು ಹಿಡಿದು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಬಳಿ ಇದ್ದ ಚಾಕು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದಾರೆ.
ಮುನೇಶಪ್ಪ ಅವರ ಸಾಹಸದ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಬಹುಮಾನದ ಭರವಸೆ ನೀಡಿದ್ದಾರೆ.