ಶಿವಮೊಗ್ಗ: ಯೋಗವನ್ನು ಪ್ರಪಂಚವೇ ಒಪ್ಪುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಯೋಗ ಆರೋಗ್ಯದ ಮೇಲೆ ಒಳ್ಳೆ ಪರಿಣಾಮಕಾರಿಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭ.ಮ.ಶ್ರೀಕಂಠ ಹೇಳಿದರು.
ಶಿವಮೊಗ್ಗ ನಗರದ ಕಲ್ಲಳ್ಳಿಯಲ್ಲಿರುವ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿರುವ ಮಧುಮೇಹ, ಅರ್ಥರೈಟಿಸ್ ಹಾಗೂ ಸೊಂಟನೋವು ಕುರಿತ 15 ದಿನಗಳ ಉಚಿತ ಯೋಗ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಿನ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಡಾ.ಶಿವರಾಮ ಕೃಷ್ಣ…
ಇದೇ ಸಂದರ್ಭದಲ್ಲಿ ನರರೋಗ ತಜ್ಞ ಡಾ. ಶಿವರಾಮಕೃಷ್ಣ ಮಾತನಾಡಿ, ದೇಹ ಮನಸ್ಸು ಸದೃಢವಾಗಿರಲು ಯೋಗ ಅಗತ್ಯವಾಗಿ ಬೇಕು. ಉತ್ತಮ ಆರೋಗ್ಯ, ಜೀವನಶೈಲಿ ಹಾಗೂ ಮಾನಸಿಕ ಒತ್ತಡ ನಿಭಾಯಿಸಲು ಯೋಗಾಭ್ಯಾಸ ಅವಶ್ಯ ಎಂದು ಹೇಳಿದರು.
ಡಾ.ಪ್ರವೀಣ್ ಕುಮಾರ್ ದೇವರಬಾವಿ…
ಸಂದರ್ಭದಲ್ಲಿ ಡಾ. ಪ್ರವೀಣ್‌ಕುಮಾರ್ ದೇವರಬಾವಿ ಮಾತನಾಡಿ, ಮಧುಮೇಹ ಹಾಗೂ ಇತರೆ ಕಾಯಿಲೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶ ಮಧುಮೇಹದ ರಾಜಧಾನಿಯಾಗುತ್ತದೆ. 7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ. 50 ಜನರಿಗೆ ಮಧುಮೇಹ ಇರುವುದು ಗೊತ್ತಿರುವುದಿಲ್ಲ. ಆಹಾರ ಪದ್ಧತಿ, ಜೀವನಶೈಲಿ ಬಹಳ ಮುಖ್ಯ ಎಂದು ತಿಳಿಸಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಇಂದು ನಗರದ 23 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ತರಗತಿಗಳು ನಡೆಯುತ್ತಿವೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಡಾ. ಎನ್.ಎಲ್.ನಾಯಕ್, ಜಿ.ಎಸ್.ಎನ್.ಮೂರ್ತಿ, ಜಿ.ವಿಜಯ್‌ಕುಮಾರ್, ಡಾ. ಪರಿಸರ ನಾಗರಾಜ್, ವಿಜಯ್ ಬಾಯರ್, ಓಂಕಾರ್, ಲವಕುಮಾರ್, ರಂಗನಾಥ್ ಉಪಸ್ಥಿತರಿದ್ದರು.