ಶಿವಮೊಗ್ಗ: ಅಗತ್ಯ ವಸ್ತು ಬಟ್ಟೆಗಳ ಮೇಲೆ ಶೇ. 5 ರಿಂದ 12 ಕ್ಕೆ ಜಿ.ಎಸ್.ಟಿ. ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗದ ಜವಳಿ ವರ್ತಕರ ಸಂಘದ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಜವಳಿ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಆಗಮಿಸಿ ನಂತರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಜ. 1 ರಿಂದ ಕೇಂದ್ರ ಸರ್ಕಾರವು ಜನಸಾಮಾನ್ಯರ ಅಗತ್ಯವು ಹಾಗೂ ಅತ್ಯಾವಶ್ಯಕ ವಸ್ತುವಾದ ಬಟ್ಟೆಗಳ ಮೇಲೆ ಈಗಿರುವ ಶೇ. 5 ಜಿ.ಎಸ್.ಟಿ.ಯಿಂದ ಶೇ. 12 ಕ್ಕೆ ಏರಿಸುತ್ತಿದೆ. ಇಂತಹ ಜವಳಿ ವಸ್ತುಗಳ ಮೇಲೆ ಶೇ. 12 ರಷ್ಟು ಜಿ.ಎಸ್.ಟಿ. ವಿಧಿಸುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ಆರೋಪಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಜವಳಿ ವರ್ತಕರು ವ್ಯಾಪಾರವಿಲ್ಲದೇ, ಹೈರಾಣಾಗಿ ಆತಂಕದಿಂದ ಬದುಕು ದುಸ್ತರವಾಗಿರುವಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಜಿ.ಎಸ್.ಟಿ. ಏರಿಕೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು. ಜಿ.ಎಸ್.ಟಿ. ಏರಿಕೆಯಿಂದ ತೆರಿಗೆ ತಪ್ಪಿಸುವ ಅನ್ಯ ಮಾರ್ಗಗಳಿಗೂ ದಾರಿಯಾಗಲಿದೆ. ಜಿ.ಎಸ್.ಟಿ. ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ. ಹಾಗಾಗಿ ಜಿ.ಎಸ್.ಟಿ. ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹೊರಟು ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಸಭೆ ನಡೆಸಿ ಮನವಿ ನೀಡಲಾಯಿತುಜವಳಿ ವರ್ತಕರ ಸಂಘದ ಅಧ್ಯಕ್ಷ ಟಿ.ಆರ್. ವೆಂಕಟೇಶಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ವಿ. ಪ್ರಭಾಕರ್ ತಿಳಿಸಿದರು. ಅನಿಲ್ ಕುಮಾರ್ ಶೆಟ್ಟಿ, ಭಾಸ್ಕರ್, ಪ್ರಮೋದ್, ಹರೀಶ್, ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳಾದ ಗೋಪಿನಾಥ್, ಅಶ್ವತ್ಥನಾರಾಯಣ ಶೆಟ್ಟಿ, ಸಂತೋಷ್, ಸುರೇಶ್, ಅನಿಲ್ ಕುಮಾರ್ ಇನ್ನಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…