ಶಿವಮೊಗ್ಗ: ಸಮಾಜದ ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಪೊಲೀಸರು ತಮ್ಮ ಕರ್ತವ್ಯದ ಒತ್ತಡದ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಬೇಕೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ಡಿಎಆರ್ ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2021 ಉದ್ಘಾಟಿಸಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.ಹೆಚ್ಚಿನ ಪೊಲೀಸರು ದೈಹಿಕ ಸದೃಢತೆ ಬಗ್ಗೆ ಗಮನ ಕೊಡುವುದಿಲ್ಲ. ಸದಾ ಒತ್ತಡದ ನಡುವೆಯೇ ಕಾರ್ಯ ನಿರ್ವಹಿಸುತ್ತಾರೆ. ಕುಟುಂಬದೊಂದಿಗೆ ಸಮಯ ಕಳೆಯಲು ಕೂಡ ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದ್ದರಿಂದ ಒತ್ತಡ ಬದಿಗಿರಿಸಿ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು.ಕ್ರೀಡಾಕೂಟಗಳಿಂದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಅತಿಮುಖ್ಯ, ಶಿಸ್ತಿನ ಜೀವನದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ವೃದ್ಧಿಯಾಗುತ್ತದೆ. ಮತ್ತು ಸಂಯಮದ ಹಾಗೂ ಉಲ್ಲಾಸದ ಜೀವನಕ್ಕೆ ಕ್ರೀಡಾಕೂಟ ಸಹಕಾರಿ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್, ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ, ಮತ್ತು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕ್ರೀಡಾಪಟುಗಳು ಕ್ರೀಡಾಪ್ರತಿಜ್ಞೆ ಸ್ವೀಕಾರ ಮಾಡಿದರು.