ಶಿವಮೊಗ್ಗ: ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಅವರ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರವನ್ನು ರೋಟರಿ ರಕ್ತನಿಧಿಯಲ್ಲಿ ರೈತ ಸಂಘದಿಂದ ಡಿ. 21 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್.ಡಿ.ಸುಂದರೇಶ್ ರೈತರ ಕಣ್ಮಣಿಯಾಗಿದ್ದಾರೆ. ರೈತರ ಪರವಾಗಿ ರಾಜ್ಯಾದ್ಯಂತ ಸಂಘಟನೆ ಮಾಡಿ ಹೋರಾಟ ಮಾಡಿದವರು. ಅವರ 29ನೇ ನೆನಪಿನ ಸಭೆಯನ್ನು ರೈತ ಸಂಘ ಅತ್ಯಂತ ಕಾಳಜಿಯಿಂದ ಮಾಡುತ್ತದೆ ಎಂದರು.ಇದರ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿ ರಕ್ತ ಕೊಡುವುದರಿಂದ 4ಜನರ ಪ್ರಾಣ ಉಳಿಸಬಹುದಾಗಿದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಭಾಗವಹಿಸಬೇಕು. ರಕ್ತದಾನ ಮಾಡುವವರು 9449968599, 8971868408ಗೆ ಸಂಪರ್ಕಿಸಬಹುದು ಎಂದರು.
ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆಯನ್ನು ವಿರೋಧಿಸಿ ರೈತ ಸಂಘವು ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಆದರೆ ಸದನದಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಪ್ರತಿಭಟನೆಯಯನ್ನು ಹಿಂತೆಗೆದುಕೊಳ್ಳಲಾಗಿದೆ. ಅಕಸ್ಮಾತ್ ಕಾಯ್ದೆ ವಾಪಸ್ಸು ತೆಗೆದುಕೊಳ್ಳದಿದ್ದರೆ ರೈತ ಸಂಘವು ಬಾರ್ಕೋಯಲು ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆದಿರುವುದು ಸ್ವಾಗತದ ವಿಷಯವಾಗಿದೆ.
ಆದರೆ ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ಖಾತ್ರಿಪಡಿಸಬೇಕು. ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಕೈ ಬಿಡಬೇಕು. ರೈತರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಸ್ಸು ಪಡೆಯಬೇಕು. ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಭತ್ತ ಖರೀದಿ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಸ್ವಾಗತವಾಗಿದೆ. ಹಾಗೆಯೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು. ಮೆಕ್ಕೆಜೋಳಕ್ಕೆ ಕ್ವಿಂಟಾಲ್ಗೆರ 3000 ನೀಡಬೇಕು. ಅತಿವೃಷ್ಠಿಯಲ್ಲಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ಅವರ ಎಲ್ಲಾ ಸಾಲಗಳ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಶಿರಸ್ತೆದಾರ ಅಮಾನತ್ತಿಗೆ ಆಗ್ರಹ: ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಶಿವಮೊಗ್ಗ ತಾಲೂಕು ಕಚೇರಿಯ ಶಿರಸ್ತೆದಾರ ಅವರನ್ನು ಅಮಾನತ್ತು ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು ಒತ್ತಾಯಿಸಿದರು.ತಾಲೂಕು ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಅತ್ಯಂತ ಗರ್ವದಿಂದ ನಡೆದುಕೊಳ್ಳುತ್ತಾರೆ. ಕಚೇರಿಗೆ ಹೋಗುವ ರೈತರು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವವನ್ನು ಕೊಡುವುದಿಲ್ಲ. ಸ್ಪಂದನೆ ಮೊದಲೇ ಇಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಅವರೇ ಮಾಡಿರುತ್ತಾರೆ. ಅದನ್ನು ಸರಿಪಡಿಸಲು ತಿಂಗಳಗಟ್ಟಲೆ ಅಲೆದಾಡಿಸುತ್ತಾರೆ. ಹಣವನ್ನು ಕೂಡ ಬಯಸುತ್ತಾರೆ. ತಹಶೀಲ್ದಾರ್ ಒಳ್ಳೆಯವರು ಆದ ಕೂಡ ಇಲ್ಲಿನ ಶಿರಸ್ತೆದಾರ್ ಅರುಣ್ಕುಿಮಾರ್ ಎಂಬುವವರು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ತಕ್ಷಣ ಇವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಡಿ.ನಾಗರಾಜ್, ಕೆ.ರಾಘವೇಂದ್ರ, ರುದ್ರಪ್ಪ ಇದ್ದರು.