ಶಿವಮೊಗ್ಗ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ ಖಂಡಿಸಿ, ಎಂಇಎಸ್ ನಿಷೇಧಿಸಬೇಕು ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಮಸಿ ಬಳಿದ ಅಪರಾಧಿಗಳನ್ನು ದಂಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಇಂದು ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಪುತ್ಥಳಿಗೆ ಹಾರ ಹಾಕಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಅಖಂಡ ಭಾರತದ ಕನಸು ಕಂಡ ಬ್ರಿಟೀಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವುದು, ಕನ್ನಡ ಬಾವುಟ ಸುಟ್ಟು ಹಾಕಿರುವುದು, ಬಸವಣ್ಣನ ಭಾವಚಿತ್ರಕ್ಕೆ ಮಸಿ ಹಚ್ಚಿರುವುದು, ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಪ್ರಾಂತ್ಯಬೇಧ ಹುಟ್ಟು ಹಾಕಿ ಹಲ್ಲೆ ನಡೆಸುತ್ತಿರುವುದು ಇದು ಸಾಮರಸ್ಯ ಸೌಹಾರ್ದತೆಗೆ ಧಕ್ಕೆ ತಂದಿದ್ದು, ಇಂತಹ ವಿಕೃತ ಮನಸ್ಥಿತಿಯ ರೂವಾರಿಗಳ ನಡೆ ನುಡಿಗಳು ಸಮಾಜದಲ್ಲಿ ಸಂಘರ್ಷವನ್ನುಂಟು ಮಾಡಿ ಅರಾಜಕತೆ ಸೃಷ್ಠಿಸಿದೆ ಎಂದು ದೂರಿದರು.ಕೂಡಲೇ ಇಂತಹ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕು.

ಎಂಇಎಸ್ ಅನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ದುಷ್ಕರ್ಮಿಗಳನ್ನು ಬಂಧಿಸದೇ ಇದ್ದಲ್ಲಿ ವೀರಶೈವ ಮಹಾಸಭಾ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದೆ.ಪ್ರತಿಭಟನೆಯಲ್ಲಿ ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ, ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಎಸ್.ಎಸ್. ಜ್ಯೋತಿ ಪ್ರಕಾಶ್, ಹೆಚ್.ಎಂ. ಚಂದ್ರಶೇಖರಪ್ಪ, ಹೆಚ್.ವಿ. ಮಹೇಶ್ವರಪ್ಪ, ಎನ್.ಜೆ. ರಾಜಶೇಖರ್, ವೈ.ಹೆಚ್. ನಾಗರಾಜ್, ರೇಣುಕಾ ನಾಗರಾಜ್, ವಿಜಯಲಕ್ಷ್ಮಿ ಪಾಟೀಲ್, ಸಿ. ಮಹೇಶ್ ಮೂರ್ತಿ, ಕತ್ತಿಗೆ ಚನ್ನಪ್ಪ, ಹೆಚ್.ಪಿ. ಗಿರೀಶ್, ರಾಜು, ಆನಂದಮೂರ್ತಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…