ಶಿವಮೊಗ್ಗ: ವಿಜಯಪುರದ ಮಹಾನಗರಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಶಿವಮೊಗ್ಗ ಶಾಖೆ ವತಿಯಿಂದ ಇಂದು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಡಿ.20ರಂದು ವಿಜಯಪುರ ಮಹಾನಗರಪಾಲಿಕೆಯ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರು ಒಳಚರಂಡಿ ದುರಸ್ತಿ ಕಾರ್ಯದ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಂತಹ ಘಟನೆಗಳಿಂದ ಸರ್ಕಾರಿ ಕೆಲಸ ನಿರ್ವಹಣೆಗೆ ಆಡಚಣೆಯಾಗುವುದಲ್ಲದೇ, ನೌಕರರ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾಗಿ ನಿರ್ಭೀತರಾಗಿ ಸೇವೆ ಸಲ್ಲಿಸಲು ಸಾಧ್ಯವಾಗದೇ, ಕೆಲಸ ಕಾರ್ಯನಿರ್ವಹಿಸಲು ಹಿಂದು ಮುಂದು ನೋಡುವಂತಾಗುತ್ತದೆ ಎಂದರು.

ಆದ್ದರಿಂದ ಸದರಿ ಘಟನೆಗೆ ಕಾರಣಕರ್ತರಾದ ಕಿಡಿಗೇಡಿಗಳನ್ನು ಬಂಧಿಸಲು ನಡೆಸಲಾಗುತ್ತಿರುವ ಪ್ರತಿಭಟನೆಗೆ ಶಿವಮೊಗ್ಗ ಮಹಾನಗರಪಾಲಿಕೆ ಅಧಿಕಾರಿ ಹಾಗೂ ನೌಕರರ ಸಂಘ ಬೆಂಬಲಿಸಿ ಪ್ರತಿಭಟನೆ ನಡೆಸಿ ಕೂಡಲೇ ಸದರಿ ಘಟನೆಗೆ ಕಾರಣಕರ್ತರಾದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದೆ.ಇತ್ತಿಚಿನ ದಿನಗಳಲ್ಲಿ ರಾಜ್ಯಾದ್ಯಂತ ಪೌರಸೇವಾ ನೌಕರರ ಮೇಲೆ ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲ್ಲೆಗೈದ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಸರ್ಕಾರಿ ನೌಕರರು ನಿರ್ಭೀತರಾಗಿ ಸೇವೆ ಸಲ್ಲಿಸುವಂತಹ ವಾತಾವರಣ ಕಲ್ಪಿಸಬೇಕೆಂದು ಹಾಗೂ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 491 ರಲ್ಲಿ ಪ್ರದತ್ತವಾಗಿರುವಂತೆ ಮಹಾನಗರಪಾಲಿಕೆ ಸಿಬ್ಬಂದಿಗೆ ಪೆÇೀಲಿಸ್ ಅಧಿಕಾರ ನೀಡಲು ಸರ್ಕಾರದ ಪ್ರಸ್ತಾವನೆ ಸಲ್ಲಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಎಂ.ಮಾರಪ್ಪ, ಉಪಾಧ್ಯಕ್ಷ ಬಿ.ಎನ್.ವೇಣುಗೋಪಾಲ್, ಖಜಾಂಚಿ ಎಸ್.ಜಿ.ಮಂಜಪ್ಪ, ಸಹಕಾರ್ಯದರ್ಶಿ ಕೆ.ಮಂಜಣ್ಣ, ವಸಂತಕುಮಾರ್, ಸುನೀಲ್ ಸೇರಿದಂತೆ ನೂರಾರು ಪಾಲಿಕೆ ನೌಕರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…