ಶಿವಮೊಗ್ಗ: ವಿಕಲಚೇತನರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲಿ, ಅವರಿಗೂ ಎಲ್ಲರಂತೆ ಬದುಕುವ ಹಕ್ಕು ಇದೆ. ಅವರಿಗೂ ಎಲ್ಲಾ ಸೌಲಭ್ಯಗಳು ಸಿಗಲಿ. ಯಾರೂ ಕೂಡ ಅವರನ್ನು ಕಡೆಗಣಿಸಬಾರದು ಎಂದು ಸೇಕ್ರೆಡ್ ಹಾರ್ಟ್ ಚರ್ಚ್ ನ ಪ್ರಧಾನ ಗುರುಗಳಾದ ಫಾ. ಸ್ಟ್ಯಾನಿ ಡಿಸೋಜ ಹೇಳಿದ್ದಾರೆ.

ಅವರು ಇಂದು ಬೆಳಗ್ಗೆ ವಿದ್ಯಾನಗರದ ಆಶಾಕಿರಣ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕ್ರಿಸ್ ಮಸ್ ಅಂಗವಾಗಿ ಮಕ್ಕಳಿಗೆ ಕೇಕ್ ವಿತರಿಸಿ ಮಾತನಾಡಿದರು.ವಿಕಲಚೇತನರಲ್ಲೂ ಎಲ್ಲಾ ಪ್ರತಿಭೆಗಳಿರುತ್ತವೆ. ಅವರಿಗೆ ದೇವರು ವಿಶೇಷವಾದ ಶಕ್ತಿ ನೀಡಿರುತ್ತಾನೆ. ಅವರನ್ನು ಕಡೆಗಣಿಸದೇ ಗೌರವದಿಂದ ಮತ್ತು ಪ್ರೀತಿಯಿಂದ ಕಾಣಿರಿ ಎಂದು ಅವರು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮಾಜದ ಮುಖಂಡ ಎಸ್. ಚಿನ್ನಪ್ಪ ಮಾತನಾಡಿ, 13 ವರ್ಷದಿಂದ ಈ ಕೇಂದ್ರದಲ್ಲಿ ಕ್ರಿಸ್ ಮಸ್ ಆಚರಣೆಯನ್ನು ವಿಶೇಷ ಚೇತನ ಮಕ್ಕಳೊಂದಿಗೆ ಮಾಡುತ್ತಿದ್ದೇವೆ.

ಈ ಸಂಸ್ಥೆಯ ಒಂದು ದಿನದ ಊಟದ ಖರ್ಚನ್ನು ಕೂಡ ಭರಿಸುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ರೋ. ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್, ರವಿಕುಮಾರ್, ಪವನ್ ಹಾಗೂ ಆಶಾಕಿರಣ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಯ್ಯ, ಸವಿತಾ ಪುರಾಣಿಕ್, ಜಯಶ್ರೀ, ಗಿರೀಶ್, ಗಂಗಮ್ಮ, ಗೀತಮ್ಮ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…