ಶಿವಮೊಗ್ಗ: ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಗೊತ್ತಿದ್ದರೂ ಸಹ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಜವಾಬ್ದಾರಿ ಮರೆತು ಪಾಲಿಕೆಯಲ್ಲಿ ಕರ್ತವ್ಯದಲ್ಲಿ ಪಾಲ್ಗೊಂಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕೋಟೆ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಇಂದು ದೂರು ನೀಡಿದ್ದಾರೆ.

ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮೇಯರ್ ಅವರಿಗೆ ಡಿಸೆಂಬರ್ 12 ರಂದು ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಆದರೆ, ಅದಕ್ಕೂ ಮುನ್ನವೇ ಮೇಯರ್ ಪಾಲಿಕೆಯ ಕಾರ್ ನಲ್ಲಿ ಪ್ರಯಾಣಿಸಿದ್ದಾರೆ. ಮತ್ತು ಪಾಲಿಕೆ ಕಚೇರಿಗೆ ಬಂದು ಫೈಲ್ ಗಳನ್ನು ತರಿಸಿ ನೋಡಿದ್ದಾರೆ. ಪಾಸಿಟಿವ್ ಎಂದು ಗೊತ್ತಿದ್ದರೂ ಹೀಗೆ ಜವಾಬ್ದಾರಿಯನ್ನು ಮೇಯರ್ ಮರೆತಿದ್ದಾರೆ. ಪಾಲಿಕೆ ಸಿಬ್ಬಂದಿಗಳಿಗೆ ಇದರಿಂದ ಆತಂಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.ಮೇಯರ್ ಅವರು ಪ್ರಧಾನಿ ಮೋದಿ ಅವರ ಜೊತೆ ಕಾಶಿಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.

ಹೊರಡುವ ಮುನ್ನ ಪರೀಕ್ಷೆ ಮಾಡಿಸಿದಾಗ, ಕೊರೋನಾ ಪಾಸಿಟಿವ್ ಗೊತ್ತಾಗಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ರದ್ದು ಮಾಡಲಾಗಿತ್ತು. ಆದ್ದರಿಂದ ಮೇಯರ್ ಅವರ ಈ ಬೇಜವಾಬ್ದಾರಿಯನ್ನು ಆಪ್ ಕಾರ್ಯಕರ್ತರು ಖಂಡಿಸಿ, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಮೇಯರ್ ಸರ್ಕಾರಿ ಕಚೇರಿ, ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ಹರಡಲು ಕಾರಣರಾಗಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ ಅವರ ವಾಹನ ಚಾಲಕ ಹಾಗೂ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಗೆ ಒಳಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಆಮ್ ಆದ್ಮಿಯ ಜಿಲ್ಲಾ ಸಂಚಾಲಕ ಮನೋಹರಗೌಡ, ಮುಖಂಡರಾದ ರವಿಕುಮಾರ್, ಸುರೇಶ್ ಕೋಟೆಕಾರ್, ಧನಂಜಯ ಮೊದಲಾದವರಿದ್ದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…