ಶಿವಮೊಗ್ಗ: ಪ್ರಿಯದರ್ಶಿನಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭ ಮತ್ತು ಸಂಘದ ರಜತ ಮಹೋತ್ಸವ ಆಚರಣೆ ಡಿ. 26 ಹಾಗೂ ಡಿ. 31 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಎಸ್. ಗುರುರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಿಯದರ್ಶಿನಿ ಬಡಾವಣೆ ನಿವಾಸಿಗಳ ಸಂಘ 1996 ರಲ್ಲಿಯೇ ಸ್ಥಾಪನೆಗೊಂಡು 25 ನೇ ವರ್ಷದ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ಸಮುದಾಯ ಭವನ ಉದ್ಘಾಟನೆ, ಸ್ನೇಹಕೂಟ, ಕ್ರೀಡಾಕೂಟ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಪ್ರಿಯದರ್ಶಿನಿ ಬಡಾವಣೆಯಲ್ಲಿ ಇತ್ತೀಚೆಗೆ ಸಮುದಾಯ ಭವನ ನಿರ್ಮಿಸಿದ್ದು, ಇದರ ಉದ್ಘಾಟನಾ ಸಮಾರಂಭ ಡಿ. 26 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ಲೋಕಾರ್ಪಣೆಗೊಳಿಸುವರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಾವಣೆಗೆ ತಾಗಿದ ಕೆರೆಯೊಂದು ಅಭಿವೃದ್ಧಿಯಾಗಿದ್ದು, ಅದರಲ್ಲಿ ನಿರ್ಮಿಸಿದ ಕಲ್ಯಾಣ ಕೂಡ ಸೂಡಾ ವತಿಯಿಂದ ಉದ್ಘಾಟನೆಯಾಗಲಿದೆ ಎಂದರು.ಸಂಘ ಕಳೆದ ಹಲವು ವರ್ಷಗಳಿಂದ ನಿವಾಸಿಗಳ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗುತ್ತಿದೆ. ಪ್ರತಿ ವರ್ಷ ಸ್ನೇಹಕೂಟ ಎಂಬ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳ ಕೊನೆಯಲ್ಲಿ ಏರ್ಪಡಿಸುತ್ತಾ ಬಂದಿದೆ. ಈ ಬಾರಿಯೂ ಕೂಡ ಡಿ. 30 ರಂದು ಸಂಜೆ 6 ಗಂಟೆಗೆ ಮಕ್ಕಳಿಗೆ, ಮಹಿಳೆಯರಿಗೆ ಷಟಲ್ ಬ್ಯಾಡ್ಮಿಂಟನ್ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಡಿ. 31 ರಂದು ರಾತ್ರಿ 9 ಗಂಟೆಗೆ ಕೃಷ್ಣ ಸಂಧಾನ ಎಂಬ ನಾಟಕ ಪ್ರದರ್ಶನ, ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಈ ಎಲ್ಲಾ ಕಾರ್ಯಕ್ರಮಗಳಿಗೆ ಬಡಾವಣೆಯ ನಿವಾಸಿಗಳು, ಸಂಘದ ಪದಾಧಿಕಾರಿಗಳು ಭಾಗವಹಿಸುವಂತೆ ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ.ಎನ್. ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಮಹಾದೇವಸ್ವಾಮಿ, ಪ್ರಮುಖರಾದ ಡಾ.ಎಸ್.ಜಿ. ಸಾಮಕ್, ಶುಭಾ ಚಿದಾನಂದ್, ಎಸ್.ವಿ. ರಾಜಾಸಿಂಗ್, ಕೆ.ಪಿ. ಶೆಟ್ಟಿ, ಎಸ್.ಟಿ. ಹಾಲಪ್ಪ, ಸುಭಾಷ್ ನಾಯಕ್, ಹರಿ ಪಟ್ನಾಯಕ್, ನಾಗೇಶ್, ವಿಕ್ರಂ, ನಾಗರಾಜ್, ಸತೀಶ್ ಇದ್ದರು.