ಶಿವಮೊಗ್ಗ: ಕೊಳಚೆ ಪ್ರದೇಶದ ನಿವಾಸಿಗಳಿಗೆ ಆದಷ್ಟು ಬೇಗ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮಹಾನಗರ ಪಾಲಿಕೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ಕಟ್ಟಿಕೊಡಲು ತುಂಬಾ ವಿಳಂಬವಾಗುತ್ತಿದೆ. ಇದುವರೆಗೂ 1590 ಮನೆಗಳಲ್ಲಿ ಮನೆ ಕಟ್ಟಿಕೊಡುವಂತೆ 940 ಜನ ಫಲಾನುಭವಿಗಳು ತಾವು ಪಾವತಿಸಬೇಕಾದ ಹಣವನ್ನು ಡಿಡಿ ಮೂಲಕ ಈಗಾಗಲೇ ಸ್ಲಂ ಬೋರ್ಡ್ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಇನ್ನುಳಿದ 650 ಜನರು ಈಗಿನ ಎಸ್ಆರ್ ದರದ ಹಣದ ಆಧಾರದಲ್ಲಿ ಹಣ ಕಟ್ಟಬೇಕಾಗಿದೆ. ಈಗಿನ ಎಸ್.ಆರ್. ದರಕ್ಕೂ, 2017ರ ಎಸ್ಆರ್ ದರಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಗುತ್ತಿಗೆದಾರ ಮನೆಯನ್ನು ನಿಲ್ಲಿಸಿಬಿಟ್ಟಿದ್ದಾನೆ.
ಇದರಿಂದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಸಿಗುವುದು ಕನಸಿನ ಮಾತಾಗಿದೆ ಎಂದರು.ಸರ್ಕಾರ ವ್ಯತ್ಯಾಸವಾದ ಹಣವನ್ನು ತಾನೇ ಕಟ್ಟಿಕೊಡಬೇಕು. ಈಗಾಗಲೇ ಸಾಲ ಸೂಲ ಮಾಡಿ ಹಣ ಕಟ್ಟಿದವರು ಮಾನಸಿಕವಾಗಿ ನೊಂದಿದ್ದಾರೆ. ನಮಗೆ ಮನೆ ಯಾವಾಗ ಸಿಗುತ್ತೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಬ್ಯಾಂಕ್ ನಿಂದ ಸಾಲ ಪಡೆಯುವುದು ಕೂಡ ಕಷ್ಟವಾಗುತ್ತಿದೆ. ದಾಖಲೆಗಳು ಕೂಡ ಸಿಗುತ್ತಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಿ ಕಾಮಗಾರಿ ಆರಂಭಿಸಿ ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿ ವಿತರಿಸಬೇಕೆಂದು ಆಗ್ರಹಿಸಿದರು.ಕೊಳಚೆ ಪ್ರದೇಶದ ನಿವಾಸಿಗಳಿಗೆ 600 ಚ.ಅಡಿ ಅಳತೆಯ ನಿವೇಶನಗಳನ್ನು ಪರಿಶಿಷ್ಟರಿಗೆ ಹಾಗೂ ವಿಕಲಚೇತನರಿಗೆ 5 ಸಾವಿರ ರೂ., ಇತರೆ ವರ್ಗದವರಿಗೆ 10 ಸಾವಿರ ರೂ. ಕಟ್ಟಿಸಿಕೊಂಡು ಹಕ್ಕುಪತ್ರ ಕೊಡಲಾಗುತ್ತಿದೆ.
ಸರ್ಕಾರ ಈಗ 1200 ಚ.ಅಡಿ ಅಳತೆಯ ನಿವೇಶನವನ್ನು ಫಲಾನುಭವಿಗಳಿಗೆ ನೀಡಬಹುದೆಂದು ಆದೇಶ ಹೊರಡಿಸಿದೆ. ಆದರೆ, ಸ್ಲಂ ಬೋರ್ಡ್ ಮಾತ್ರ ಕೇವಲ 600 ಚ. ಅಡಿಯ ನಿವೇಶನಗಳನ್ನು ಮಾತ್ರ ನೀಡುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಮಧ್ಯ ಪ್ರವೇಶ ಮಾಡಿ ಸ್ಲಂ ಬೋರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸಿ 1200 ಚ. ಅಡಿ ನಿವೇಶನ ಕೊಡಿಸಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಭೀಮಣ್ಣ, ಸುರೇಶ್, ರಘುಪತಿ, ಪ್ರಸಾದ್ ಇದ್ದರು.