ಡಿಸೆಂಬರ್ ನ ಚಳಿಯಲಿ
ಇರುಳು ಚೆಲ್ಲಿದ ಹಾಲು ಬೆಳದಿಂಗಳಲ್ಲಿ
ಬಾನಂಗಳದಲಿ ಮಿನುಗುವ ನಕ್ಷತ್ರಗಳ ಸಾಲು
ಮರಗಳ ತುದಿಯ ಎಲೆಗಳ ಮೇಲೆ ಬೆಳಕು ಚೆಲ್ಲಿತ್ತು…ಅಲ್ಲಿ ಕಂಡಿತ್ತು
ಪ್ರೀತಿಯ ಸಾರವ ಸಾರಿದ ಕ್ರಿಸ್ತನ ಶಿಲುಬೆ
ಕ್ರಿಸ್ಮಸ್ ರಾತ್ರಿಯಲ್ಲಿ ಇನ್ನಷ್ಟು ಚಳಿ
ಮನೆ ಮನೆಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದು
ನಕ್ಷತ್ರಗಳನ್ನೆಲ್ಲ ಭೂಮಿಗಿಳಿಸಿ
ಅಲ್ಲಿ ತೂಗು ಹಾಕಲಾಗಿತ್ತು
ಬರೆದಿತ್ತು ….ಯೇಸುವಿನ ತತ್ವ
ದೇವದೂತನ ಕ್ಷಮೆ ಕರುಣೆಗಳ ಮಹತ್ವ
ಕ್ರೈಸ್ತರ ಪ್ರಾರ್ಥನೆಯ ಕೊರಳು ಬಾನಿಗೇರಿತ್ತು
ಮತ್ತೆ….ಅವತರಿಸಿ ಬರಲೆಂದು ಯೇಸುವು
ಎತ್ತರದ ಗೋಪುರದ ಗಂಟೆಯು ಮೊಳಗಿತ್ತು…ನೆಲಸಲಿ ಶಾಂತಿ ಎಂದು
ಅದು ಜಗಕ್ಕೆ ಸಾರಿತ್ತು….ಅಲ್ಲಿ
ಪ್ರೀತಿಯ ಸಂಕೇತವು ಶಿಲುಬೆಯನ್ನೇರಿತ್ತು.
ಕಣ್ಣಹನಿಗಳ ಸುರಿಸಿ ಕೈಮುಗಿದು
ನಿರ್ಮಲ ಮನದಿ ಪ್ರಾರ್ಥನೆ ಹಾಡಿ
ಪ್ರೀತಿಯೇ ದೇವರೆಂದವನ ನೆನೆದಿತ್ತು
ಹಗೆಗಳಿಗೂ ಒಳಿತು ಕೋರುವ
ಕಲ್ಲು ಹೊಡೆದ ಕಟುಕರಿಗೂ
ಕ್ಷಮೆಯನ್ನೇ ಕಾಣಿಕೆಯಾಗಿ ನೀಡಿದ
ದಯಾಮಯನು ಅವತರಿಸಿದ ದಿನವನಿಂದು ಸ್ಮರಿಸಿತ್ತು.
*ಶ್ರೀಮತಿ.ಅನಿತಕೃಷ್ಣ* ಶಿಕ್ಷಕಿ. ತೀರ್ಥಹಳ್ಳಿ