ಶಿವಮೊಗ್ಗ: ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಇಂದು ಗೋಪಿವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಹಾವೀರ ವೃತ್ತದಲ್ಲಿ ಎಂಇಎಸ್ ಪ್ರತಿಕೃತಿ ದಹಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಮಹಾರಾಷ್ಟ್ರ ರಾಜಕಾರಣಿಗಳು ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇಪದೇ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘಟನೆ ಮತ್ತು ರಾಜಕೀಯ ಪಕ್ಷವನ್ನು ಹುಟ್ಟುಹಾಕಿ, ಅದಕ್ಕೆ ಮಹಾರಾಷ್ಟ್ರದಿಂದ ಹಣಕಾಸಿನ ನೆರವು ಹರಿಸಿ ಬೆಳಗಾವಿಯ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟಿ ಹಲವು ದಶಕಗಳಿಂದ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾನೂನಾತ್ಮಕವಾಗಿ ಬೆಳಗಾವಿಯನ್ನು ಪಡೆಯಲು ವಿಫಲರಾಗಿರುವ ಮಹಾರಾಷ್ಟ್ರ ರಾಜಕಾರಣಿಗಳು ವಾಮಮಾರ್ಗವನ್ನು ಆಯ್ಕೆ ಮಾಡಿಕೊಂಡು ಎಂಇಎಸ್, ಶಿವಸೇನೆ ಮೂಲಕ ಬೆಳಗಾವಿಯಲ್ಲಿ ಸದಾ ಸಂಘರ್ಷದ ವಾತಾವರಣ ನಿರ್ಮಿಸಿದ್ದಾರೆ. ಎಂಇಎಸ್ ಹೆಸರಿನಲ್ಲಿ ಸಾವಿರಾರೂ ಮಹಾರಾಷ್ಟ್ರೀಯನ್ನರು ಗಡಿದಾಟಿ ಬೆಳಗಾವಿಗೆ ಬಂದು ಮರಾಠಿ ಮಹಾಮೇಳ ನಡೆಸುವುದು. ಕನ್ನಡಿಗರ ವಿರುದ್ಧ, ಕರ್ನಾಟಕ ಸರ್ಕಾರದ ವಿರುದ್ಧ ಮಾನಹಾನಕಾರಿ, ಪ್ರಚೋದನಾತ್ಮಕ ಭಾಷಣ ಮಾಡುವುದು. ಮುಗ್ದ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವುದು ನಡೆಸುತ್ತಾಲೆ ಬಂದಿದ್ದಾರೆ. ಇದರ ಪರಿಣಾಮವಾಗಿ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ನೆಮ್ಮದಿ, ಶಾಂತಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ. ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ಮತ್ತು ಇತರೆ ಭಾಷಾ ಸಮುದಾಯಗಳು ಎಂಇಎಸ್ ಮತ್ತು ಶಿವಸೇನೆಯನ್ನು ಈಗಾಗಲೇ ತಿರಸ್ಕರಿಸಿದ್ದಾರೆ.
ಹೀಗಾಗಿ ಹತಾಶೆಗೆ ಒಳಗಾದ ಈ ಸಂಘಟನೆಗಳು ಹಿಂಸಾಚಾರಕ್ಕೆ ಇಳಿದಿದೆ ಎಂದು ದೂರಿದರು.ಈ ಸಂಘಟನೆಗಳ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದು, ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳೆದಿದ್ದು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಈ 2 ಸಂಘಟನೆಗಳನ್ನು ನಿಷೇಧಿಸಬೇಕು. ನಿಷೇಧಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಕಾನೂನು ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಸರ್ಕಾರ ಕೂಡಲೇ ಆರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಪ್ರಶಾಂತ್, ಉಪಾಧ್ಯಕ್ಷ ಎನ್.ರವೀಂದ್ರಪ್ರಸಾದ್, ಜೆ.ವಿನಯ್, ಆರ್.ಮಂಜುನಾಥ್, ಪರಮೇಶ್ವರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ, ನಾಗರಾತ್ನ, ಮಹೇಶ್ವರಿ ಇದ್ದರು.