ಶಿವಮೊಗ್ಗ: ಪದವಿ ಕಾಲೇಜಿನಲ್ಲಿ ಪೂರ್ಣಪ್ರಮಾಣದ ತರಗತಿಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಮತ್ತು ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕೋವಿಡ್ 2ನೇ ಲಾಕ್ಡೌಲನ್ ನಂತರ ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳೂಗಳೇ ಕಳೆದಿವೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಭರದಿಂದ ಸಾಗಿವೆ. ಇದರ ಜೊತೆಯಲ್ಲಿ ಅನೇಕ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಿಗೆ ಪ್ರವೇಶವನ್ನು ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿರುವುದರಿಂದ ಪೂರ್ಣಪ್ರಮಾಣದ ತರಗತಿಗಳು ನಡೆಯದೇ ಇರುವುದು ಮತ್ತು ಸರ್ಕಾರ ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಮಾಡಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ತರಗತಿಗಳು ಸರಾಗವಾಗಿ ನಡೆಯುವ ಅವಶ್ಯಕತೆ ಇದೆ. ಆದರೆ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿರುವುದರಿಂದ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಕ್ರಮವಹಿಸಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸರ್ಕಾರವು 2021-22ನೇ ಸಾಲಿನಿಂದ 20,000 ರೂ.ಕಾಲೇಜು ಶುಲ್ಕ ಹಾಗೂ ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ 10,000 ರೂ.ನಿಂದ 20,000 ರೂ.ವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ 40,000 ರೂ.ವರೆಗೆ ಶುಲ್ಕವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ನೀಡಬೇಕಾಗಿರುತ್ತದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕೋವಿಡ್ನಿಂ0ದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಲಕ/ ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ಬಿವಿಪಿ ಮುಖಂಡರಾದ ದರ್ಶನ್, ಮನೋಹರ, ಚಂದನ್, ಅಭಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.