ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘ, ಶಿವಮೊಗ್ಗ ವತಿಯಿಂದ ಜ.2 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಮುದ್ರಕರ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ತಿಳಿಸಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶೇಷವಾಗಿ ಮುದ್ರಕರ ಕುಟುಂಬದವರಿಗೆಂದು ಮೀಸಲಾದ ಮುದ್ರಕರ ಹಬ್ಬ ಆಚರಣೆಯು ಶಿವಮೊಗ್ಗದಲ್ಲಿ ಕಳೆದ ಕೆಲವಾರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಈ ಹಬ್ಬವನ್ನು ಮುದ್ರಣಾಲಯಗಳ ಹಾಗೂ ಮುದ್ರಣ ಸಂಬಂಧಿ ವೃತ್ತಿಯ ಮಾಲೀಕರು ಹಾಗೂ ನೌಕರ ವರ್ಗದವರು ಕುಟುಂಬ ಸಹಿತ ಪಾಲ್ಗೊಂಡು ಆಚರಿಸಲಾಗುತ್ತದೆ ಎಂದರು.ಅಂದು ಬೆಳಿಗ್ಗೆ 9:30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮನರಂಜನಾ ಕ್ರೀಡೆಗಳನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಪುರುಷರ ಕ್ರೀಡಾಕೂಟವನ್ನು ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಮಹಿಳಾ ಕ್ರೀಡಾಕೂಟವನ್ನು ಮೇಯರ್ ಸುನೀತಾ ಅಣ್ಣಪ್ಪ, ಮಕ್ಕಳ ಕ್ರೀಡಾಕೂಟವನ್ನು ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ ಎಂದರು.
ಕುಟುಂಬದವರಿಗೆ ಅಲಂಕೃತ ಟಾಂಗಾ ಸವಾರಿ, ಪಾರಿವಾಳದೊಂದಿಗೆ ಫೋಟೋ ಸೆಷನ್, ಫನ್ನಿಗೇಮ್ಸ್, ಕ್ವಿಜ್, ಅಂತ್ಯಾಕ್ಷರಿ, ಗುರಿ ಇಡಿ-ಬಾಣ ಬಿಡಿ, ಡಾರ್ಟ್ಗೇ ಮ್ ಇತ್ಯಾದಿಗಳನ್ನು ಒಳಗೊಂಡ ಮನರಂಜನೆ ಕಾರ್ಯಕ್ರಮಗಳಿದ್ದು, ಸ್ಥಳದಲ್ಲಿಯೇ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದರು. ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧಸ್ವಾಮೀಜಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್ ಕುಮಾರ್, ಬೆಂಗಳೂರಿನ ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್ನ ಅಧ್ಯಕ್ಷ ಸಿ.ಆರ್. ಜನಾರ್ಧನ್ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಮಲೆನಾಡು ವ್ಯಾಪ್ತಿಯ ಹಿರಿಯ ಮುದ್ರಕರಿಗೆ ಹಾಗೂ ಮುದ್ರಣ ಕಾರ್ಮಿಕರಿಗೆ ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದ ನಂತರ ಖ್ಯಾತ ಜಾದೂಗಾರ ಪ್ರಶಾಂತ್ ಜಾದೂಗಾರ್ ಅವರಿಂದ ವಿಶಿಷ್ಟ ಜಾದೂ ಪ್ರದರ್ಶನ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಿಗಿ, ನಿರ್ದೇಶಕರಾದ ರಮೇಶ್, ಮಂಜುನಾಥ್, ಯೋಗೀಶ್, ಮುರುಳಿ, ಮೋಹನ, ಚಂದ್ರು, ಸುರೇಶ್ ನಾಡಿಗ್, ಸಪ್ತಗಿರಿ ಗಿರೀಶ್ ಉಪಸ್ಥಿತರಿದ್ದರು.