ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ ಉಚಿತವಾಗಿ ಸಿಗುವ ವಾತಾವರಣ ನಿರ್ಮಾಣಗೊಂಡಲ್ಲಿ ಸಮಾಜ ಸದೃಢವಾಗುತ್ತದೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ನಗರದ ಕಲ್ಲಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ಡಯಾಬೀಟಿಸ್ ಹಾಗೂ ಅರ್ಥೈಟಿಸ್ ಉಚಿತ ಶಿಬಿರದ ಸಮಾರೋಪ ಹಾಗೂ ಯೋಗಕೇಂದ್ರದ ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿಯೇ ಜೀವನಪೂರ್ತಿ ಆದಾಯ ಕಳೆದುಹೋಗುತ್ತದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಉಚಿತ ಶಿಕ್ಷಣ ಸಿಗುತ್ತದೆ. ಅದರಂತೆ ನಮ್ಮ ದೇಶದಲ್ಲಿಯೂ ಎಲ್ಲರಿಗೂ ಉಚಿತ ಶಿಕ್ಷಣ ಸೌಲಭ್ಯ ಸಿಗಬೇಕು ಎಂದು ತಿಳಿಸಿದರು.
ಪ್ರತಿ ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ದೇಹ, ಮನಸ್ಸು ಸದೃಢವಾಗಿಸುವ ಜತೆಯಲ್ಲಿ ಮನುಷ್ಯ ಉತ್ಸಾಹದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಯೋಗ ಅಭ್ಯಾಸದಿಂದ ನಾವು ಯಾವುದೇ ಖರ್ಚಿಲ್ಲದೇ ಹಲವಾರು ಕಾಯಿಲೆಗಳಿಂದ ಮುಕ್ತರಾಗಬಹುದು ಎಂದರು.
ಶಿವಗAಗಾ ಯೋಗಕೇಂದ್ರ ನಗರದ 23 ಶಾಖೆಗಳಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ರಾಜ್ಯದಲ್ಲಿಯೇ ಯೋಗಕೇಂದ್ರ ಮಾದರಿ ಆಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ, ಯೋಗಗುರು ಸಿ.ವಿ.ರುದ್ರಾರಾಧ್ಯ ಮಾತನಾಡಿ, ಇಂದು ರಾಜಕಾರಣಕ್ಕೆ ಪ್ರಾಮಾಣಿಕ ಯುವಕರು, ಸೃಜನಶೀಲರ ಅವಶ್ಯಕತೆ ಇದೆ. ಯುವನಾಯಕರು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಕೃಷಿ ಉತ್ಪನ್ನ ಮಾರುಕಟ್ಟೆ ನೂತನ ಅಧ್ಯಕ್ಷ ಟಿ.ಬಿ.ಜಗದೀಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಅವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಯೋಗಕೇಂದ್ರದ ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು.
ಯೋಗಶಿಕ್ಷಕ ವಿಜಯ್ ಬಾಯರ್, ಓಂಕಾರ್, ಕಾಟನ್ ಜಗದೀಶ್, ಕೈಗಾರಿಕೋದ್ಯಮಿ ಹಾಲಪ್ಪ, ಲವಕುಮಾರ್, ವಿಜಯ್‌ಕುಮಾರ್, ಶಿವಕುಮಾರ್ ಹಾಜರಿದ್ದರು.