ಶಿವಮೊಗ್ಗ: ರಾಜ್ಯದೆಲ್ಲೆಡೆ ಕೊರೋನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಸರ್ಕಾರ ನಿಯಮಾವಳಿಗಳನ್ನು ಪ್ರಕಟಿಸಿದ್ದು, ಈ ನಡುವೆ ಶಿವಮೊಗ್ಗದಿಂದ 86 ಬಸ್ ಗಳಲ್ಲಿ 4 ಸಾವಿರಕ್ಕೂ ಅಧಿಕ ಭಕ್ತರು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿ ಹಿಂತಿರುಗಿದ್ದಾರೆ.

ಅವರೆಲ್ಲರಿಗೂ ಇಂದು ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನ್ ಮಾಡಲಾಯಿತು. ಶೀತ, ನೆಗಡಿ, ಗಂಟಲು ನೋವು ಇರುವ ಸುಮಾರು 500 ಕ್ಕೂ ಹೆಚ್ಚು ಜನರಿಗೆ ರ್ಯಾಪಿಡ್ ಟೆಸ್ಟ್ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ವರದಿ ಬಂದಿದೆ ಎಂದು ಆರೋಗ್ಯಾಧಿಕಾರಿ ಡಾ. ಮಲ್ಲಪ್ಪ ಹೇಳಿದ್ದಾರೆ.ಮಂಡ್ಯ, ಮೈಸೂರು, ತಮಿಳುನಾಡು ಭಾಗಕ್ಕೆ ಹೋಗಿ ಬಂದ ಎಲ್ಲರೂ ಕಡ್ಡಾಯವಾಗಿ 7 ದಿನಗಳ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಜ್ವರ, ಶೀತ, ಕೆಮ್ಮು, ಗಂಟಲುನೋವು ಬಂದರೆ ಮತ್ತು ಉಸಿರಾಟದ ತೊಂದರೆ ಕಾಣಿಸಿದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಮೆಗ್ಗಾನ್ ನಲ್ಲಿ 400 ಕ್ಕೂ ಹೆಚ್ಚು ಬೆಡ್ ಗಳ ಲಭ್ಯತೆ ಇದೆ. ಯಾರೂ ಕೂಡ ಆತಂಕಪಡುವುದು ಬೇಡ ಎಂದರು.ಈಗಾಗಲೇ 86 ಬಸ್ ಗಳಲ್ಲಿ ಪ್ರವಾಸಕ್ಕೆ ಹೋಗಿ ಬಂದಿರುವ 72 ಬಸ್ ಗಳ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ ಅಗತ್ಯತೆ ಕಂಡು ಬಂದವರಿಗೆ ರ್ಯಾಪಿಡ್ ಟೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ನಿನ್ನೆಯೇ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರ ಆದೇಶದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇಂದು ಬೆಳಗ್ಗೆಯಿಂದಲೇ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂನಲ್ಲಿ ಪ್ರವಾಸ ಮುಗಿಸಿ ಬಂದವರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…