ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೇ ತಂದೇ ತರುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಸದನದಲ್ಲಿ ಇದನ್ನು ಮಂಡಿಸಿ ಜಾರಿಗೆ ತರಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಪರಿಷತ್ ನಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದ ಕಾರಣ ಬಹುಮತ ಸಿಗಲಾರದು ಎಂಬ ದೃಷ್ಠಿಯಿಂದ ಅದನ್ನು ಮಂಡಿಸಲು ಆಗಲಿಲ್ಲ. ಈಗ ಆ ತೊಂದರೆ ಇಲ್ಲ. ನಮಗೆ ಪೂರ್ಣ ಬಹುಮತ ಇರುವುದರಿಂದ ಇದರಲ್ಲಿ ಗೆಲ್ಲುತ್ತೇವೆ. ಯಾವುದೇ ವೈಫಲ್ಯ ಆಗಿಲ್ಲ ಎಂದರು.ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗಾಗಲೇ ಅದು ರೆಡ್ ಜೋನ್ ನಲ್ಲಿದೆ. ಸರ್ಕಾರ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

ಹಾಗಾಗಿಯೇ ವಾರಾಂತ್ಯದ ಕರ್ಫ್ಯೂ ಜಾರಿಗೆ ತರಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ಹಿಂದೆ ಕೊರೋನಾ ಎರಡನೇ ಅಲೆಯ ಬಗ್ಗೆ ಸರ್ಕಾರ ಸರಿಯಾದ ಮುಂಜಾಗ್ರತೆ ವಹಿಸಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಮತ್ತು ಅದಕ್ಕಾಗಿ ಬೆಲೆ ಕೂಡ ತೆರಬೇಕಾಯಿತು. ಹಾಗಾಗಿ ಬಿಗಿ ಕ್ರಮ ಅನಿವಾರ್ಯ ಮತ್ತು ಸರ್ಕಾರ ಈ ಬಗ್ಗೆ ಆದೇಶಗಳನ್ನು ಹೊರಡಿಸಿದರೆ ಅದನ್ನು ಪಾಲಿಸಬೇಕಾದುದು ಎಲ್ಲರ ಹೊಣೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎಂಬ ನಿರ್ಲಕ್ಷ್ಯಭಾವ ಸಲ್ಲದು. ತಜ್ಞರ ವರದಿಯಂತೆಯೇ ಸರ್ಕಾರ ಈ ಕ್ರಮ ಕೈಗೊಂಡಿದೆಯೇ ಹೊರತು ಕಾಂಗ್ರೆಸ್ ನವರಿಗೆಂದೇ ಇದನ್ನು ರೂಪಿಸಿಲ್ಲ ಎಂದರು.

ವರದಿ ಮಂಜುನಾಥ್ ಶೆಟ್ಟಿ…