ಶಿವಮೊಗ್ಗ: ಸಾಗರ ತಾಲೂಕು ವರದಾಪುರದ ಪರಿಸರದಲ್ಲಿ ವೈರ್ ಲೆಸ್ ಮಿನಿ ಟವರ್ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ವರದಾಪುರ ಶ್ರೀಧರ ಸೇವಾ ಮಹಾಮಂಡಲದಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಲಕ್ಷ್ಮೀಪ್ರಸಾದ್ ಗೆ ಮನವಿ ಸಲ್ಲಿಸಲಾಯಿತು.

ವರದಾಪುರದಲ್ಲಿ ಶ್ರೀಧರಸ್ವಾಮಿ ಶ್ರೀಧರಾಶ್ರಮ ಸ್ಥಾಪಿಸಿ ಅದನ್ನೊಂದು ಪುಣ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಲ್ಲಿ ಬೆಟ್ಟದ ತುದಿಯಲ್ಲಿ ಧರ್ಮ ಧ್ವಜವನ್ನು ಸ್ಥಾಪಿಸಲಾಗಿದೆ. ಅಲ್ಲಿರುವ ಧರ್ಮಧ್ವಜ ಕುಟೀರದಲ್ಲಿ ಬಹುವರ್ಷಗಳ ಶ್ರೀ ಭಗವಾನರು ತಪಸ್ಸನ್ನು ಮಾಡಿದ್ದರು. ಜೊತೆಗೆ ಅದರ ಸುತ್ತಮುತ್ತಲೂ ಕೂಡ ಋಷಿ ಮುನಿಗಳು ತಪಸನ್ನಾಚರಿಸಿದ್ದರು. ಅಗಸ್ತ್ಯ ಮಹರ್ಷಿಗಳು ಆ ಕ್ಷೇತ್ರಕ್ಕೆ ಬಂದಿದ್ದರು ಎಂಬ ಪ್ರತೀತಿ ಕೂಡ ಇದೆ. ಹಾಗಾಗಿ ಅದೊಂದು ಧರ್ಮ ಪವಿತ್ರ ಕ್ಷೇತ್ರವಾಗಿದೆ ಎಂದು ಮನವಿದಾರರು ತಿಳಿಸಿದರು.ಈ ಸ್ಥಳದಲ್ಲಿ ಪೊಲೀಸ್ ಇಲಾಖೆಯವರು ವೈರ್ ಲೆಸ್ ಮಿನಿ ಟವರ್ ಅನ್ನು ಸ್ಥಾಪಿಸುವ ಇರಾದೆ ಹೊಂದಿದ್ದಾರೆ. ಈಗಾಗಲೇ ಸ್ಥಳ ಪರಿಶೀಲನೆ ಕೂಡ ಮಾಡಿದ್ದಾರೆ.

ಇಂದಿಗೂ ಕೂಡ ಭಕ್ತರು ಈ ಸ್ಥಳಕ್ಕೆ ಬರಿಗಾಲಲ್ಲಿ ನಡೆದುಕೊಂಡು ಬರುತ್ತಾರೆ. ಈಗ ಟವರ್ ಸ್ಥಾಪಿಸಿದರೆ ಬೂಟು ಹಾಕಿಕೊಂಡು ಬರಬೇಕಾಗುತ್ತದೆ. ಇದು ಆ ಸ್ಥಳದ ಪಾವಿತ್ರ್ಯತೆಗೆ ಕುಂದು ತರುತ್ತದೆ ಎಂದು ದೂರಿದರು.ಈ ಗುಡ್ಡದ ಸಮೀಪವೇ ಬೆಂಕಟಹಳ್ಳಿ ಗುಡ್ಡವಿದ್ದು, ಅಲ್ಲಿ ಸ್ಥಾವರ ಸ್ಥಾಪಿಸಬಹುದಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ತಮ್ಮ ನಿರ್ಧಾರ ಬದಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀಧರ ಸೇವಾ ಮಹಾಮಂಡಲದ ಕಾರ್ಯದರ್ಶಿ ಕೆ.ವಿ. ಶ್ರೀಧರರಾವ್, ಪ್ರಮುಖರಾದ ಪ್ರಕಾಶ್, ಕೆ.ಬಿ. ಪ್ರಸನ್ನಕುಮಾರ್, ಮಂಜುನಾಥ್, ಗುರುರಾಜ್, ದೀನದಯಾಳ್, ರಾಮಪ್ರಸಾದ್, ನಟರಾಜ್, ಭಾಸ್ಕರ್, ಮಧುಮತಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…